ಹಾನಗಲ್ ವಿಧಾನಸಭಾ ಕ್ಷೇತ್ರ- ಫಲಿತಾಂಶ ನ.2ರ ಮಂಗಳವಾರ ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭ-ಎಣಿಕೆಗೆ ಎಲ್ಲ ಸಿದ್ಧತೆ-ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಇಎನ್ಎಲ್ ಹಾವೇರಿ.ನ.01: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ನವಂಬರ್ 2ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವಗಿರಿಯ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಭದ್ರತೆ ಮತ್ತು ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದರು.
ಮತ ಎಣಿಕೆ ಪ್ರಕ್ರಿಯೆ ಪೂರ್ವ ಸಿದ್ಧತೆ ಕುರಿತಂತೆ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಿಗ್ಗೆ 7-30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಗುವುದು. 7-45ಕ್ಕೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭಿಸಲಾಗುವುದು. 8 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಕಾರ್ಯ ಆರಂಭಿಸಲಾಗುವುದು. ಅಂಚೆ ಮತದಾನ ಎಣಿಕೆಗೆ ಒಂದು ಕೊಠಡಿ ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆಗೆ ಎರಡು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ ಏಳು ಎಣಿಕೆ ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಶೇ.83.76 ರಷ್ಟು ಮತ: ಅಕ್ಟೋಬರ್ 30 ರಂದು ನಡೆದ ಮತದಾನದಲ್ಲಿ ಒಟ್ಟಾರೆ 2,04,481ಮತದಾರರ ಪೈಕಿ 1,71,264 ಜನರು ಮತ ಚಲಾಯಿಸಿದ್ದಾರೆ. ಶೇ.83.76ರಷ್ಟು ಮತ ಚಲಾವಣೆಯಾಗಿದೆ. 463 ಅಂಚೆ ಮತ ಚಲಾವಣೆ ಹಾಗೂ 12 ಸೇವಾ ಮತಗಳು ಚಲಾವಣೆಯಾಗಿವೆ. 263 ಮತಗಟ್ಟೆಗಳ ಪೈಕಿ 140ರ ಮತಗಟ್ಟೆ ಸಂಖ್ಯೆಯಲ್ಲಿ ಅತಿ ಹೆಚ್ಚು ಶೇ.95.11ರಷ್ಟು ಮತದಾನವಾಗಿದೆ ಹಾಗೂ 103ರ ಮತಗಟ್ಟೆ ಸಂಖ್ಯೆಯಲ್ಲಿ ಶೇ.66.61ರಷ್ಟು ಕಡಿಮೆ ಮತದಾನವಾಗಿದೆ. ಮತದಾನದ ಸಂದರ್ಭದಲ್ಲಿ ರತ್ನಾಪುರ(81), ಅಕ್ಕಿವಳ್ಳಿ(107) ವಿವಿಪ್ಯಾಟ್ ಹಾಗೂ ಅಕ್ಕಿಆಲೂರ(122), ಕಲ್ಲಾಪೂರ(161) ಮತಗಟ್ಟೆಗಳಲ್ಲಿ ಮತಯಂತ್ರಗಳ ತಾಂತ್ರಿಕ ದೋಷ ಕಂಡು ಬಂದಿತ್ತು. ನಂತರ ಸರಿಪಡಿಸಿ ಮತದಾನ ಪೂರ್ಣಗೊಳಿಸಲಾಯಿತು ಎಂದು ಹೇಳಿದರು.
ಎಣಿಕೆ ಕೊಠಡಿ: ಮತ ಎಣಿಕೆ 02 ಕೊಠಡಿಗಳು ಸಿದ್ಧಮಾಡಲಾಗಿದೆ. ಅಂಚೆ ಮತಪತ್ರ ಹಾಗೂ ETPBS ಎಣಿಕೆ ಸಲುವಾಗಿ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಸೇರಿ ಒಟ್ಟು 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಎಣಿಕೆ ಮೇಲ್ವಿಚಾರಕ ಒಬ್ಬರು ಎಣಿಕೆ ಸಹಾಯಕರ ನೇಮಕ ಮಾಡಿದೆ ಎಂದು ತಿಳಿಸಿದರು.
ಒಟ್ಟು 14 ಟೇಬಲ್‍ಗಳಲ್ಲಿ 18 ಪೂರ್ಣ ರೌಂಡ್ ಮತ್ತು 19ನೇ ರೌಂಡ್‍ನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಅಂಚೆ ಮತ ಪತ್ರ ಹಾಗೂ ETPBS ಅಂಚೆ ಮತ ಪತ್ರಗಳ ಎಣಿಕೆ ಕಾರ್ಯವು ಚುನಾವಣಾಧಿಕಾರಿಗಳ ಸಮಕ್ಷಮ ನಡೆಯಲಿದೆ ಎಂದು ತಿಳಿಸಿದರು.
ಇವಿ ಸ್ಲೀಪ್ ಎಣಿಕೆ: ಇ.ವಿ.ಎಂ ಮತ ಯಂತ್ರಗಳ ಎಣಿಕೆ ಮುಕ್ತಾಯದ ನಂತರ 05 ವಿ.ವಿ.ಪ್ಯಾಟ್ ಮತ ಯಂತ್ರಗಳಲ್ಲಿನ ವಿ.ವಿ.ಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುವುದು. ಹಾಗಾಗಿ ಫಲಿತಾಂಶ ಪ್ರಕಟಣೆ ವಿಳಂಬವಾಗಲಿದೆ ಎಂದು ತಿಳಿಸಿದರು.
ರೌಂಡ್‍ವಾರು ಮಾಹಿತಿ: ಪ್ರತಿ ರೌಂಡ್‍ವಾರು ಮತ ಗಳಿಕೆಯ ವಿವರವನ್ನು ಚುನಾವಣಾಧಿಕಾರಿಗಳು ಮತ್ತು ಚುನಾವಣಾ ಸಾಮಾನ್ಯ ವೀಕ್ಷಕರು ಪರಿಶೀಲಿಸಿ ಖಾತರಿಯಾದ ನಂತರ ಆಯಾ ಎಣಿಕೆ ಕೊಠಡಿಯಲ್ಲಿ ಮತ್ತು ಸಾರ್ವಜನಿಕರಿಗೆ ಪ್ರಚುರಪಡಿಸಲಾಗುವುದು. ಎನ್.ಐ.ಸಿ ಮೂಲಕ ENCORE ತಂತ್ರಾಂಶದಲ್ಲಿ ಅಪಲೋಡ್ ಮಾಡಲಾಗುವುದು.
ಗುರುತಿನ ಚೀಟಿ ಕಡ್ಡಾಯ: ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ಮಾಡಲು ಗುರುತಿನ ಚೀಟಿ (ಪಾಸ್) ಹೊಂದಿರುವವರಿಗೆ ಮಾತ್ರ ಅವಕಾಶ. ಈಗಾಗಲೇ ಸಿಬ್ಬಂದಿಗಳಿಗೆ, ಮಾಧ್ಯಮವದವರಿಗೆ ಪಾಸ್ ನೀಡಲಾಗಿದೆ. ಎಣಿಕೆ ಏಜೆಂಟರು ಚುನಾವಣಾಧಿಕಾರಿಯಿಂದ ಪಾಸ್ ಪಡೆಯಬೇಕು. ಎಣಿಕೆ ಕೇಂದ್ರದಲ್ಲಿ ಪ್ರವೇಶ ಪಡೆಯುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ. ಒಂದೆ ಡೋಸ್ ಲಸಿಕೆ ಪಡೆದವರು 72 ಗಂಟೆ ಮುಂಚಿತ ಆರ್.ಟಿ.ಪಿ.ಸಿಆರ್ ನೆಗಟಿವ್ ವರದಿಯನ್ನು ಹಾಜರಪಡಿಸಬೇಕು. 7 ಗಂಟೆಗೆ ಸರಿಯಾಗಿ ಎಣಿಕೆ ಕೇಂದ್ರದ ನಿಗಧಿತ ಟೇಬಲ್ ಬಳಿ ಹಾಜರಿರಬೇಕು ಎಂದು ತಿಳಿಸಿದರು.
ನಿಷೇಧ: ಎಣಿಕೆ ಕೇಂದ್ರದಲ್ಲಿ ಮೊಬೈಲ್ ದೂರವಾಣಿಗಳು, ಎಲೆ ಅಡಿಕೆ, ಗುಟಕಾ, ಬೀಡಿ-ಸಿಗ್ರೇಟ್, ಪಾನ್ ಮಸಾಲಾ, ತಿಂಡಿ ತಿನಿಸುಗಳು, ಕುಡಿಯುವ ನೀರು ಮತ್ತು ಶಸ್ತ್ರಾಸ್ತ್ರ ಮುಂತಾದವುಗಳಿಗೆ ಪ್ರವೇಶವಿಲ್ಲ. ಚಾಕು, ಕತ್ತರಿ, ಕಡ್ಡಿಪೆಟ್ಟಿಗೆ ಮತ್ತು ಅಗ್ನಿ ಅವಘಢಕ್ಕೆ ಆಹ್ವಾನ ನೀಡುವ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಕಂಟ್ರೋಲ್ ರೂಂ: ಮತ ಎಣಿಕೆ ಕೇಂದ್ರದಲ್ಲಿ 24*3 ದಿನ ಅವಧಿಗೆ ಕಂಟ್ರೋಲ್ ರೂಂನ್ನು ಆರಂಭಿಸಿದೆ. 3 ಪಾಳೆಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ.
ಭದ್ರತೆ ಮತ್ತು ಕಾನೂನು ವ್ಯವಸ್ಥೆ: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮತ ಎಣಿಕೆ ಕೇಂದ್ರದ ಪೊಲೀಸ್ ಭದ್ರತೆ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡಿ, ಈಗಾಗಲೇ ಜಿಲ್ಲೆಯಾದ್ಯಂತ 144 ಕಲಂ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಹಾನಗಲ್, ಹಾವೇರಿ, ದೇವಗಿರಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ವಿಶೇಷ ಪೊಲೀಸ್ ಭದ್ರತೆ ಹಾಕಲಾಗಿದೆ. ವಿಜಯೋತ್ಸವ, ಮೆರವಣಿಗೆ ನಿಷೇಧಿಸಲಾಗಿದೆ, ಜಿಲ್ಲೆಯಾದ್ಯಂತ ನವಂಬರ್ 5ವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಭದ್ರತೆಗಾಗಿ 250 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 10 ಆಪ್ ಸೆಕ್ಸನ್ ಪ್ಯಾರಾಮಿಲಟರಿ ಪಡೆ ನಿಯೋಜಿಸಲಾಗಿದೆ. ಈ ಪೈಕಿ ನಾಲ್ಕು ಪಡೆಗಳನ್ನು ಇಂಜನೀಯರಿಂಗ್ ಕಾಲೇಜ್ ಭದ್ರತೆಗೆ ನಿಯೋಜಿಸಲಾಗಿದೆ. ಉಳಿದ ಪಡೆಗಳನ್ನು ಹಾಗೂ ಐಆರ್‍ಬಿ ಆರು ಪ್ಲಟೂನ್, ಮೂರು ಸೆಕ್ಷನ್ ಡಿಎಆರ್ ತುಕಡಿ, ಐದು ಡಿವೈಎಸ್‍ಪಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಸುವ್ಯವಸ್ಥೆ ಉಸ್ತುವಾರಿ ವಹಿಸಲಿದ್ದಾರೆ. ಮಂಗಳವಾರ ಬೆಳಿಗ್ಗೆ 6 ರಿಂದಲೇ ಬಿಗಿಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಹನಗಳ ಪಾರ್ಕಿಂಗ್‍ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಿಗಧಿತ ಪಾಸ್ ಹೊಂದಿದವರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ, ಸಹಾಯಕ ಚುನಾವಣಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು.