29 C
Hubli
ಏಪ್ರಿಲ್ 26, 2024
eNews Land
ಸುದ್ದಿ

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

ಇಎನ್ಎಲ್ ಹುಬ್ಬಳ್ಳಿ :

ಯೋಜನೆಯಲ್ಲಿ ಹಲವು ಮಹತ್ವದ ಮಾರ್ಪಾಡುಗಳಿಗೆ ಶಿಫಾರಸ್ಸು

ಹುಬ್ಬಳ್ಳಿ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣದ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಕಂಡು ಬಂದ ಹಿನ್ನಲೆಯಲ್ಲಿ, ಯೋಜನೆಯಲ್ಲಿ ಅಗತ್ಯ ಬದಲಾವಣೆ ತರುವ ನಿಟ್ಟಿನಲ್ಲಿ ರಚಿಸಲಾದ ತಜ್ಞರ ಸಮಿತಿ ತನ್ನ ವರದಿಯನ್ನು ಸಿದ್ದಪಡಿಸಿದೆ. ಸಮಿತಿ ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿಕೊಂಡಿದ್ದು, ಯೋಜನೆಯಲ್ಲಿ ಹಲವು ಮಹತ್ವದ ಮಾರ್ಪಾಡುಗಳಿಗೆ ಶಿಫಾರಸ್ಸು ಮಾಡಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಲಹಾ ಸಮಿತಿ ಸದಸ್ಯರು ಪತ್ರಿಕಾಗೋಷ್ಠಿ ನೆಡೆಸಿದರು.

ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜು ಉಪ ಕುಲಪತಿ ಅಶೋಕ ಶೆಟ್ಟರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚೆನ್ನಮ್ಮ ವೃತ್ತದಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡುವ ನಿಟ್ಟಿಲ್ಲಿ ಹಾಗೂ ಭವಿಷ್ಯದ ದೃಷ್ಟಿಯಿಂದ ಪ್ಲೈ ಓವರ್ ನಿರ್ಮಾಣ ಅತ್ಯಗತ್ಯವಾಗಿದೆ. ಚೆನ್ನಮ್ಮ ವೃತ್ತಕ್ಕೆ ಸಮಾನಂತರಾಗಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಭೂ ಸ್ವಾಧೀನ ಮಾಡಬೇಕಾಗುತ್ತದೆ ಇದಕ್ಕೆ ಹಣ ವೆಚ್ಚವಾಗುತ್ತದೆ. ಜೊತೆಗೆ ಜನರು‌ ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇದು ಕಾರ್ಯಸಾಧುವಲ್ಲದ ಯೋಜನೆಯಾಗಿದೆ.

ಹುಬ್ಬಳ್ಳಿ ನಗರದಲ್ಲಿ ವಾರ್ಷಿಕವಾಗಿ ಶೇ.7 ರಷ್ಟು ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಹಾಗೂ ರಸ್ತೆ ಕ್ಷಮತೆ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚನ್ನಮ್ಮ ವೃತ್ತದ ಫ್ಲೈ ಓವರ್ ಯೋಜನೆಯನ್ನು ರೂಪಿಸಿದೆ. ಸದ್ಯ 16 ಸಾವಿರ ದಷ್ಟಿರುವ ವಾಹನ ದಟ್ಟಣೆ ವಾರ್ಷಿಕ ಶೇ.3.5 ಬೆಳವಣಿಗೆ ದರದಲ್ಲಿ ವೃದ್ಧಿಸಿದರೆ, ಚನ್ನಮ್ಮ ವೃತ್ತದಲ್ಲಿನ ವಾಹನ ದಟ್ಟಣೆ 2027 ಕ್ಕೆ ,18 ಸಾವಿರ 2037 ಕ್ಕೆ 24 ಸಾವಿರಕ್ಕೂ ಹೆಚ್ಚಾಗಬಹುದು. ಭವಿಷ್ಯದಲ್ಲಿ ಸಂಚಾರಿ ದಟ್ಟಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ಲೈ ಓವರ್ ನಿರ್ಮಾಣ ಅಗತ್ಯವಾಗಿದೆ. ಚನ್ನಮ್ಮ ವೃತ್ತ ಸಂಪರ್ಕಿಸುವ 7 ರಸ್ತೆಗಳ ಕ್ಷಮತೆ, ಅತ್ಯಧಿಕ ಸಂಚಾರ ದಟ್ಟಣೆ ಸಮಯದಲ್ಲಿನ ತೀರ ಅಸಮರ್ಥವಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಹಲವು ಮಹತ್ವದ ಮಾರ್ಪಾಡುಗಳನ್ನು ಫ್ಲೈ ಓವರ್ ಯೋಜನೆಯಲ್ಲಿ ತರಲು ಶಿಫಾರಸ್ಸು ಮಾಡಿದೆ.

ಫ್ಲೈ ಓವರ್ ನಿರ್ಮಾಣದಲ್ಲಿ ಐ.ಆರ್.ಸಿ(ಇಂಡಿಯನ್ ರೋಡ್ಸ್ ಕಾಂಗ್ರೇಸ್) ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ವಾಹನಗಳು, ಪಾದಚಾರಿಗಳ ನಡುವಿನ ಸಂಚಾರ ಸಂಘರ್ಷ ಕಡಿಮೆಯಾಗಬೇಕು. ಅಡೆತಡೆಗಳು ಇಲ್ಲದ ಸುಗಮ ಸಂಚಾರ ಸಾಧ್ಯವಾಗಬೇಕು. ರಸ್ತೆ ಸುರಕ್ಷಿತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

3 ಬಿ.ಆರ್.ಟಿ.ಎಸ್ ಬಸ್ ನಿಲ್ದಾಣಗಳ ಸ್ಥಳಾಂತರ

ಹೊಸೂರು, ಹಳೇ ಬಸ್ ನಿಲ್ದಾಣ ಹಾಗೂ ಪಾಲಿಕೆ ಎದುರಿನ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಸಮಿತಿ ಶಿಫಾರಸ್ಸು ಮಾಡಿದೆ. ಹೊಸೂರು ಬಸ್ ನಿಲ್ದಾಣವನ್ನು ಐ.ಟಿ. ಪಾರ್ಕ್ ಎದುರು, ಹಳೇ ಬಸ್ ನಿಲ್ದಾಣದ ಎದುರಿನ ನಿಲ್ದಾಣವನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸಂಚರಿಸುವವರಿಗೆ ಅನುಕೂಲವಾಗುವಂತೆ ನೂತನ ಬಸ್ ನಿಲ್ದಾಣದಲ್ಲಿ, ಧಾರವಾಡದಿಂದ ಹುಬ್ಬಳ್ಳಿಗೆ ಆಗಮಿಸಿದವರಿಗೆ ಅನುಕೂಲವಾಗುವಂತೆ ಬಸವ ವನದ ಹತ್ತಿರ ಸ್ಥಳಾಂತರಿಸಲು ಸೂಚಿಸಲಾಗಿದೆ. ಪಾಲಿಕೆ ಎದುರಿನ ಬಸ್ ನಿಲ್ದಾಣವನ್ನು ಮುಂದೆ 300‌ ಮೀಟರ್ ದೂರದಲ್ಲಿ ನಿರ್ಮಿಸಬಹುದು. ಇದರಿಂದ ಯೋಜನೆಗೆ ಅನುಕೂಲವಾಗಿದ್ದು, ಮೇಲು ಸೇತುವೆ ರಸ್ತೆ ಹಾಗೂ ಸೇವಾ ರಸ್ತೆಗಳು 7.5 ಮೀಟರ್ ವರೆಗೆ ವಿಸ್ತರಿಸಲಿವೆ. ಪಾದಚಾರಿಗಳ ಅನುಕೂಲವಾಗುವಂತೆ ಫೂಟ್ ಬಾತ್ ಸಹ ನಿರ್ಮಿಸಬಹುದಾಗಿದೆ.

ಕೊಪ್ಪಿಕರ್ ರಸ್ತೆ ಹಾಗೂ ಮಾರುಕಟ್ಟೆ ಅನುಕೂಲವಾಗುವಂತೆ ಮೇಲು ಸೇತುವೆ ನಿರ್ಮಾಣ

ಮೊದಲಿನ ಯೋಜನೆಯಲ್ಲಿ ಗದಗ ರಸ್ತೆಯ ಅಂಬೇಡ್ಕರ್ ವೃತ್ತದ ಎಲ್.ಐ.ಸಿ. ಕಚೇರಿ ಎದುರಿನಿಂದ ಚನ್ನಮ್ಮ ವೃತ್ತದವರೆಗೆ ಮೇಲ ಸೇತುವೆಯನ್ನು ನಿರ್ಮಿಸಲಾಗುತ್ತಿತ್ತು. ಇದನ್ನು ಬದಲಾಯಿಸಲು ಶಿಫಾರಸ್ಸು ಮಾಡಲಾಗಿದ್ದು, ಕೊಪ್ಪಿಕರ್ ರಸ್ತೆ ಸಂಪರ್ಕಕ್ಕಿಸುವ ರಸ್ತೆಯಿಂದ 30 ಮೀಟರ್ ದೂರದ ಪಾಲಿಕೆ ಎದುರಿನಿಂದ ಮೇಲು ಸೇತುವೆ ಆರಂಭವಾಗಲಿದೆ. ಇದರಿಂದ ಭೂ ಸ್ವಾಧೀನ ಹಾಗೂ 450 ಮೀ ಉದ್ದದ ಸೇತುವೆ ನಿರ್ಮಾಣ ಖರ್ಚು ಉಳಿಯಲಿದೆ. ಜೊತೆಗೆ ಕೋಪ್ಪಿಕರ್ ರಸ್ತೆಯಿಂದ ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶದ ಸಂಪರ್ಕ ಕಡಿತವಾಗುವುದಿಲ್ಲ. ಜೊತೆಗೆ ಮಾರುಕಟ್ಟೆ ಪ್ರದೇಶಕ್ಕೆ ಆಗಮಿಸುವರಿಗೂ ಮೇಲು ಸೇತುವೆ ಬಳಕೆಗೆ ಬರಲಿದೆ.

ವಿಜಯಪುರ ರಸ್ತೆಯ ಅಭಿವೃದ್ಧಿ

ಚನ್ನಮ್ಮ ವೃತ್ತ ಸಂಪರ್ಕಿಸುವ ವಿಜಯಪುರ ರಸ್ತೆಯ ಅಭಿವೃದ್ಧಿ ಹೆಚ್ಚಿನ ಮಹತ್ವ ನೀಡಲಾಗಿದೆ. ರೈಲ್ವೇ ಸೇತುವೆವರೆಗೆ ಪಿಲ್ಲರ್ ಮೇಲೆ ಆಧಾರವಾದ ಮೇಲು ಸೇತುವೆ ನಿರ್ಮಿಸಲಾಗುವುದು. ದೇಸಾಯಿ ಸರ್ಕಲ್ ಬಳಿ ಸೇವಾ ರಸ್ತೆಯ ಅಗಲೀಕರಣಕ್ಕೆ ಅಗತ್ಯ ಭೂ ಸ್ವಾಧೀನ ಮಾಡಿಕೊಳ್ಳಲು ಶಿಫಾರಸ್ಸು ಮಾಡಲಾಗಿದೆ.‌ ಗದಗ ರಸ್ತೆಯ ಮೇಲು ಸೇತುವೆ ನಿರ್ಮಾಣದ ವೆಚ್ಚ ತಗ್ಗುವುದರಿಂದ, ಯೋಜನೆಯ ವೆಚ್ಚದಲ್ಲಿ ಏರಿಕೆಯಾಗದೆ ವಿಜಯಪುರ ರಸ್ತೆ ಅಭಿವೃದ್ಧಿ ಪಡಿಸಬಹುದಾಗಿದೆ.

ಸೌಂದರ್ಯಕರಣ, ಪಾರ್ಕಿಂಗ್, ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್, ಶೌಚಾಲಯ ನಿರ್ಮಾಣಕ್ಕೆ ಸಲಹೆ

ತಜ್ಞರ ಸಮಿತಿ ಚನ್ನಮ್ಮ ವೃತ್ತದ ಸಂಚಾರ ದಟ್ಟಣೆ ತಗ್ಗಿಸುವ ಜೊತೆಗೆ ವೃತ್ತದ ಸೌಂದರ್ಯೀಕರಣಕ್ಕೂ ಶಿಫಾರಸ್ಸು ಮಾಡಿದೆ. ಫೈ ಓವರ್ ತಳಬಾಗದಲ್ಲಿ ಚನ್ನಮ್ಮ ವೃತ್ತದಲ್ಲಿನ ಹೋಟೆಲ್,ಅಂಗಡಿ, ವ್ಯಾಪಾರಸ್ಥರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಬೇಕು. ಅಗತ್ಯ ಇರುವ ಕಡೆ ಶೌಚಾಲಯವನ್ನು ನಿರ್ಮಿಸಬೇಕು. ಗದಗ, ವಿಜಯಪುರ, ಗೋಕುಲ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜರ್ ಸ್ಟೇಷನ್ ‌ಗಳನ್ನು ನಿರ್ಮಿಸುವಂತೆ ಶಿಫಾರಸ್ಸು ಮಾಡಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಸಮಿತಿ ವರದಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗಶಃ ಒಪ್ಪಿಕೊಂಡಿದ್ದು, ಶಿಫಾರಸ್ಸಿ ಅನುಸಾರ ಯೋಜನೆಯಲ್ಲಿ ಬದಲಾವಣೆ ಮಾಡಲು ದೆಹಲಿ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯಲಿದ್ದಾರೆ. ಯೋಜನೆಯ ವೆಚ್ಚದಲ್ಲಿ ಸಾಕಷ್ಟು ಬದಲಾವಣೆಯಾಗುವುದಿಲ್ಲ. ಭೂ ಸ್ವಾಧೀನವು ಕಡಿಮೆಯಾಗಲಿದೆ. ಬಿ.ಆರ್.ಟಿ.ಎಸ್. ಬಸ್ ನಿಲ್ದಾಣಗಳನ್ನು ಸ್ಥಳಾಂತರ ಮಾಡಲು ಸೂಚಿಸಿರುವುದಿಂದ ಯೋಜನೆ ಜಾರಿಗೆ ರಾಜ್ಯ ಸರ್ಕಾರ, ನಗರಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆಯಿಂದ ಅನುಮತಿ ದೊರಕಬೇಕಿದೆ. ಶಿಫಾರಸ್ಸಿನ ಅನ್ವಯ ಬದಲಾದ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ, ಜನಪ್ರತಿನಿಧಿಗಳು, ಸಾರ್ವಜನಿಕರೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಯೋಜನೆ ಕುರಿತು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವುದಿದ್ದರೆ. ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದರು.

ಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಲಾಭುರಾಮ್, ಧಾರವಾಡ ಐ.ಐ.ಟಿ. ಡೀನ್, ಪ್ರೋ.ನಾಗೇಶ ಐಯ್ಯರ , ಡಿ.ಆರ್.ಎನ್ . ಇನ್ಫಾಸ್ಟಕ್ಚರ್, ವ್ಯವಸ್ಥಾಪಕ ನಿರ್ದೇಶಕ ದಿನೇಶ ನಾಯಕ , ರಾಷ್ಟ್ರೀಯ ಹೆದ್ದಾರಿಗಳ ವಲಯದ ಮುಖ್ಯ ಅಭಿಯಂತರ ವಿಜಯ್ ಕುಮಾರ್, ಅಧೀಕ್ಷಕ ಅಭಿಯಂತರ ವಸಂತನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಗ್ರಾಮ ಪಂಚಾಯತಿ ಚುನಾವಣೆ ಡಿ.27 ರಂದು: ಡಿಸಿ ನಿತೇಶ ಪಾಟೀಲ

eNEWS LAND Team

SOUTH WESTERN RAILWAY SERVICE CANCELLATION

eNEWS LAND Team

ಪುರಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಟಿಕೇಟ ಆಕಾಂಕ್ಷೆಗೆ ಅಭ್ಯರ್ಥಿಗಳ ಪೈಪೋಟಿ

eNEWS LAND Team