30 C
Hubli
ನವೆಂಬರ್ 28, 2022
eNews Land
ಸುದ್ದಿ

ಲಿಂಗಪತ್ತೆ ಹಾಗೂ ನಕಲಿ ವೈದ್ಯರ ಮೇಲೆ ಕಠಿಣ ಕ್ರಮಕೈಗೊಳ್ಳಿ ಆಸ್ಪತ್ರೆಗಳ ಸೇವೆಗಳ ಬಗ್ಗೆ ದರಪಟ್ಟಿ ಪ್ರದರ್ಶನ ಕಡ್ಡಾಯ: ಡಿಸಿ ಸಂಜಯ ಶೆಟ್ಟೆಣ್ಣವರ

Listen to this article

ಇಎನ್ಎಲ್ ಹಾವೇರಿ: ಹೆಣ್ಣು ಶಿಶುವಿಗೆ ಮಾರಕವಾಗಿರುವ ಭ್ರೂಣಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ತೀವ್ರ ನಿಗಾವಹಿಸಿ. ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ ಮೇಲೆ ಕಠಿಣ ಕ್ರಮಕೈಗೊಳ್ಳಿ, ಪ್ರತಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲೂ ಸಿಸಿ ಟಿವಿ ಅಳವಡಿಸಿ ಕನಿಷ್ಟ ಒಂದು ತಿಂಗಳ ಹಿಂದಿನ ಸಿಸಿ ಟಿವಿ ಪುಟೆಜ್ ಸಂಗ್ರಹಿಸಿ ಪರಿಶೀಲಿಸಿ ಎಂದು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಹೆಣ್ಣು-ಭ್ರೂಣ ಹತ್ಯೆ(ಪಿಸಿ ಮತ್ತು ಪಿಎನ್‍ಡಿಟಿ) ಕಾನೂನು ಜಾರಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪಿಸಿ ಮತ್ತು ಎನ್‍ಡಿಟಿಯ ಜಿಲ್ಲಾ ಸಲಹಾ ಸಮಿತಿ ತ್ರೈಮಾಸಿ ಸಭೆ ಹಾಗೂ ಕೆಪಿಎಂಇ ಕಾಯ್ದೆಯ ನೊಂದಣಿ ಹಾಗೂ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸಮಿತಿಯ ಸಭೆಯಲ್ಲಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳ ನೊಂದಣಿ, ನಿರ್ವಹಣೆ ಹಾಗೂ ಲಿಂಗಾನುಪಾತ ಕುರಿತಂತೆ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿಯದಂತೆ ಕ್ರಮಕೈಗೊಳ್ಳಬೇಕು. ಹೆಣ್ಣು ಮಗು ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸಬೇಕು. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ತೀವ್ರತರದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಲಿಂಗಾನುಪಾತ ಕಡಿಮೆ ಇರುವ ತಾಲೂಕುಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಂತೆ ವೈದ್ಯರಿಗೆ ಸಲಹೆ ನೀಡಿದರು.
ಕೆಲ ಕ್ಲಿನಿಕ್‍ಗಳು ಹಾಗೂ ಸ್ವಯಂ ಆಗಿ ಅಭಾರ್ಷನ್ ಡ್ರಗ್ಸ್ ಪಡೆದು ಭ್ರೂಣ ಹತ್ಯೆಯಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ತೀವ್ರತರವಾಗಿ ಗಮನಿಸಬೇಕು. ಒಂದೊಮ್ಮೆ ಡ್ರಗ್ಸ್ ಪಡೆದು ಅಭಾರ್ಷನ್ ಆಗಿದ್ದರೆ ಇದಕ್ಕೆ ಕಾರಣರಾದ ವೈದ್ಯರು ಅಥವಾ ಡ್ರಗ್ಸ್ ಪೂರೈಸಿದ ಔಷಧಿ ಅಂಗಡಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಅಭಾರ್ಷನ್ ಡ್ರಗ್ಸ್‍ಗಳು ಯಾವ ಔಷಧಿ ಅಂಗಡಿ ಅಥವಾ ಆಸ್ಪತ್ರೆಗಳಲ್ಲಿ ಹೆಚ್ಚು ಬಳಕೆ ಮತ್ತು ಮಾರಾಟವಾಗಿದೆ ಎಂಬುದನ್ನು ಜಿಲ್ಲಾ ಡ್ರಗ್ಸ್ ಕಂಟ್ರೋಲರಿಂದ ಮಾಹಿತಿ ಪಡೆದು ನಿಗಾವಹಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯ ಹಾವೇರಿ, ರಾಣೇಬೆನ್ನೂರು ಮತ್ತು ಸವಣೂರಿನಲ್ಲಿ ಲಿಂಗಾನುಪಾತ ಕಡಿಮೆ ಪ್ರಮಾಣದಲ್ಲಿದೆ. ಈ ಭಾಗದ ಸ್ಕ್ಯಾನಿಂಗ್ ಸೆಂಟರ್ ಮೇಲೆ ತೀವ್ರ ನಿಗಾವಹಿಸಬೇಕು. ಅನಿರೀಕ್ಷಿತ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸ್ಕ್ಯಾನಿಂಗ್ ಸೆಂಟರ್‍ಗಳ ನೊಂದಣಿ, ನವೀಕರಣ ಸಂದರ್ಭದಲ್ಲಿ ಕೆಪಿಎಂಇ ನಿಯಮಾವಳಿಗಳ ಪೂರೈಕೆ ಕುರಿತಂತೆ ಕಠಿಣ ತಪಾಸಣೆ ನಡೆಸಬೇಕು, ಡಯಾನಿಸ್ಟಿಕ್ ಸೆಂಟರ್‍ಗಳಲ್ಲಿ ಕಡ್ಡಾಯವಾಗಿ ವೈದ್ಯರು ಇರಬೇಕು. ಇಂತಹ ಕೇಂದ್ರಗಳನ್ನು ಮಾತ್ರ ನೊಂದಣಿ ಮತ್ತು ನವೀಕರಣಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಬಾಲಿಕಾ ಸಾಫ್ಟವೇರ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ನಕಲಿ ವೈದ್ಯರ ಮೇಲೆ ಕಠಿಣ ಕ್ರಮ: ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ಜಿಲ್ಲೆಯ ಖಾಸಗಿ ಕ್ಲಿನಿಕ್, ನಸಿಂಗ್ ಹೋಂ, ಲ್ಯಾಬೋರೆಟರಿ, ಸ್ಕ್ಯಾನಿಂಗ್ ಸೆಂಟರ್ ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಿಕೊಳ್ಳದ ಸಂಸ್ಥೆಗಳ ಮೇಲೆ ನಿಯಮಾನುಸಾರ ಕಠಿಣ ಕ್ರಮಕೈಗೊಂಡು ದಂಡವಸೂಲಿ ಮಾಡಬೇಕು. ನೊಂದಣಿ ಪಡೆಯದೇ ಅನಧಿಕೃತವಾಗಿ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ಮೇಲೆ ಎಫ್‍ಐಆರ್ ದಾಖಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಕಲಿ ವೈದ್ಯರ ಪತ್ತೆಗಾಗಿ ತೀವ್ರತರವಾದ ತಪಾಸಣೆ ನಡೆಸಬೇಕು. ಪೊಲೀಸ್ ನೆರವು ಪಡೆದು ಅನಿರೀಕ್ಷಿತ ದಾಳಿ ನಡೆಸಿ ಇಂತಹವರ ಮೇಲೆ ಕೇಸ್ ದಾಖಲಿಸಬೇಕು. ನಕಲಿ ವೈದ್ಯರಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡದಂತಹ ಕಠಿಣ ಶಿಕ್ಷೆ ಕಾನೂನಿನಲ್ಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಹಾಸಿಗೆಯುಳ್ಳ ಖಾಸಗಿ ನರ್ಸಿಂಗ್ ಹೋಂಗಳು ಆಕ್ಸಿಜನ್ ಪ್ಲಾಂಟ್‍ಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಯಾವ ನರ್ಸಿಂಗ್ ಹೋಂಗಳಲ್ಲಿ ಆಕ್ಸಿಜನ್ ಪ್ಲಾಂಟ್‍ಗಳು ಇಲ್ಲವೋ ಅಂತಹ ನರ್ಸಿಂಗ್ ಹೋಂಗಳ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಖಾಸಗಿ ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬೋರಟರಿಗಳಲ್ಲಿ ವೈದ್ಯಕೀಯ ತ್ಯಾಜ್ಯವಿಲೇವಾರಿ, ಅಗ್ನಿನೊಂದಕಗಳ ಅಳವಡಿಕೆ ಕುರಿತಂತೆ ತಾಲೂಕಾ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಅವರು ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ 87 ನರ್ಸಿಂಗ್ ಹೋಂ, 396 ಕ್ಲಿನಿಕ್, 53 ಲ್ಯಾಬೋರಟರಿಗಳು ಕೆಪಿಎಂಇ ಕಾಯ್ದೆಯಡಿ ನೊಂದಣಿಯಾಗಿವೆ. ಔಷಧಿ ಪದ್ಧತಿವಾರು ಜಿಲ್ಲೆಯಲ್ಲಿ 171 ಅಲೋಪತಿ, 257 ಆಯುರ್ವೇದ, ಒಂದು ಯೋಗ ಮತ್ತು ನ್ಯಾಚರೋಪತಿ, ಮೂರು ಯುನಾನಿ ಹಾಗೂ 21 ಹೋಮಿಯೋಪತಿ ಪದ್ಧತಿ ಚಿಕಿತ್ಸೆಗಾಗಿ ಕ್ಲಿನಿಕ್, ನರ್ಸಿಂಗ್ ಹೋಂಗಳು ನೊಂದಾಯಿಸಿಕೊಂಡಿವೆ ಎಂದು ಹೇಳಿದರು.
ಡಾ.ದೇವರಾಜ ಅವರು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಂಭತ್ತು ಸರ್ಕಾರಿ ಹಾಗೂ 58 ಖಾಸಗಿ ಸೇರಿದಂತೆ 67 ಸ್ಕ್ಯಾನಿಂಗ್ ಸೆಂಟರ್‍ಗಳು ನೊಂದಣಿಯಾಗಿವೆ. ನೊಂದಣಿ ಮತ್ತು ನವೀಕರಣ ಶುಲ್ಕವಾಗಿ ಫೆಬ್ರುವರಿ ಮಾಹೆವರೆಗೆ ರೂ.24 ಲಕ್ಷ ಸಂಗ್ರಹಿಸಿರುವುದಾಗಿ ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಸಹಾಯಕ ಔಷಧಿ ನಿಯಂತ್ರಕರಾದ ಶ್ರೀಮತಿ ನೀಲಿಮಾ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ಡಾ.ವಿಲಾಸ ಹಿರೇಗೌಡರ, ಡಾ.ತ್ರಿವೇಣಿ ಹೆಗ್ಗೇರಿ, ಡಾ.ಎಂ.ವಿ.ಕುಂಟೆ, ಡಾ.ಮಲ್ಲಿಕಾರ್ಜುನ ಎಂ, ಡಾ.ಜಯಾನಂದ, ತಾಲೂಕಾ ವೈದ್ಯಾಧಿಕಾರಿಗಳಾದ ಡಾ.ಪ್ರಭಾಕರ ಕುಂದೂರ, ಡಾ.ಸುಹಿಲ್ ಹರವಿ, ಡಾ.ಚಂದ್ರಕಲಾ , ಡಾ.ಮನೋಜ್ ನಾಯಕ್, ಡಾ. ಸಂತೋಷಕುಮಾರ, ಡಾ.ಲಿಂಗರಾಜ್, ಡಾ.ಮಕಂದರ್, ಶ್ರೀಮತಿ ಪರಿಮಳಾ ಜೈನ್, ಸಂತೋಷಕುಮಾರ ಸುರ್ವೇ, ಶ್ರೀಮತಿ ತೇಜಶ್ವಿನಿ ಕಾಶೆಟ್ಟಿ ಉಪಸ್ಥಿತರಿದ್ದರು.

Related posts

ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್

eNewsLand Team

ಘಟಿಕೋತ್ಸವ: ಚಿನ್ನಕ್ಕೆ ಮುತ್ತಿಕ್ಕಿದ ಸುಜಾತಾ

eNEWS LAND Team

ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡ ಸಿಇಓ ಭೂಬಾಲನ್

eNEWS LAND Team