ರೂಪಾಂತರ ಹೊಂದಿದ ಕೋವಿಡ್ 2-3 ದಿನಗಳ ಅವಧಿಯಲ್ಲಿ ದುಪ್ಪಟ್ಟಾಗುವ ಸಾಧ್ಯತೆಗಳಿವೆ: ಡಿಸಿ
ಇಎನ್ಎಲ್ ಧಾರವಾಡ
ಕೋವಿಡ್ ವೈರಾಣು ಪುನಃ ವೇಗವಾಗಿ ಹರಡುತ್ತಿರುವುದರಿಂದ ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸರ್ವಸಿದ್ಧತೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳ ಮುಖ್ಯಸ್ಥರು ನಿರ್ಲಕ್ಷ ತೋರಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೂಪಾಂತರ ಹೊಂದಿದ ಕೋವಿಡ್ 2-3 ದಿನಗಳ ಅವಧಿಯಲ್ಲಿ ದುಪ್ಪಟ್ಟಾಗುವ ಸಾಧ್ಯತೆಗಳಿರುತ್ತದೆ. ಸೋಂಕಿತರಲ್ಲಿ ಶೇ.10 ರಷ್ಟು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗಬಹುದು. ಆ ಹಂತದಲ್ಲಿ ಆಸ್ಪತ್ರೆಯ ಹಾಸಿಗೆಗಳು ಹಾಗೂ ಚಿಕಿತ್ಸೆಯ ಕೊರತೆಗಳಾಗಬಾರದು. ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆಗಳಾಗಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಶೇ.30 ರಷ್ಟು ಹಾಸಿಗೆಗಳನ್ನು ಮೀಸಲಿಡಲು ಸೂಚಿಸಲಾಗಿದೆ. ಏಕಾಏಕಿ ಸುತ್ತಲಿನ ಜಿಲ್ಲೆಗಳಲ್ಲಿ ಸೋಂಕು ವ್ಯಾಪಿಸಿದರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಉನ್ನತ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಎನ್‍ಐವಿ ಮಾಸ್ಕ್‍ಗಳು, ಕ್ಯಾನುಲಾಗಳು ಸೇರಿದಂತೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಖರೀದಿ ಪ್ರಕ್ರಿಯೆಗಳು ಟೆಂಡರ್ ಮೂಲಕ ಪಾರದರ್ಶಕವಾಗಿ ನಡೆಯಬೇಕು. ಆಸ್ಪತ್ರೆಯ ಆಕ್ಸಿಜನ್ ಘಟಕಗಳು ಹಾಗೂ ಸಾಂದ್ರಕಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಅಗತ್ಯವಿರುವ ವಸ್ತುಗಳ ಬೇಡಿಕೆ ಪಟ್ಟಿಯನ್ನು ಆಸ್ಪತ್ರೆಗಳ ಮುಖ್ಯಸ್ಥರು ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು. ನಿರ್ಲಕ್ಷಿಸಿದರೆ ಆಸ್ಪತ್ರೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿಸಲಾಗುವುದು ಎಂದು ಸೂಚಿಸಿದರು.
ಮೊದಲ ಮತ್ತು 2ನೇ ಅಲೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳನ್ನು ಆಧರಿಸಿ ಈಗ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚೌಹಾಣ, ಡಾ: ಲಕ್ಷ್ಮೀಕಾಂತ, ಡಾ. ರಾಜಶೇಖರ್ ದ್ಯಾಬೇರಿ, ಡಾ. ಸುಜಾತಾ ಹಸವೀಮಠ, ಡಾ. ಶಶಿ ಪಾಟೀಲ, ಡಾ. ಎಸ್.ಎಂ. ನಿಂಬಣ್ಣವರ, ಡಾ. ಅಯ್ಯನಗೌಡರ, ಡಾ. ತನುಜಾ ನಾಯಕ, ಔಷಧ ನಿಯಂತ್ರಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಸೇರಿ ಜಿಲ್ಲೆಯ ಎಲ್ಲ ತಹಶೀಲ್ದಾರರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.