27.4 C
Hubli
ಏಪ್ರಿಲ್ 24, 2024
eNews Land
ಸುದ್ದಿ

ಕಿಮ್ಸ್ ಆವರಣದಲ್ಲಿ 24X7 ಕೋವಿಡ್ ಸ್ವ್ಯಾಬ್ ಸಂಗ್ರಹ,ತಪಾಸಣೆ , ಸೋಂಕಿತರ ಭೌತಿಕ ಪರಿಶೀಲನೆ ಚಿಕಿತ್ಸೆ

ಇಎನ್ಎಲ್ ಹುಬ್ಬಳ್ಳಿ :

ಹೆಚ್ಚುತ್ತಿರುವ ಕೋವಿಡ್ ವೈರಾಣು ನಿಯಂತ್ರಣಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿವೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ದಿನದ 24 ಗಂಟೆಗಳ ಕಾಲವೂ ಕೋವಿಡ್ ಸ್ವ್ಯಾಬ್ ಸಂಗ್ರಹ, ಸೋಂಕಿತರ ಭೌತಿಕ ತಪಾಸಣೆ (ಫಿಜಿಕಲ್ ಟ್ರಯೇಜಿಂಗ್) ಹಾಗೂ ಚಿಕಿತ್ಸೆಗೆ ದಾಖಲಿಸುವ ವ್ಯವಸ್ಥೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ ತಿಳಿಸಿದ್ದಾರೆ.

ಹಿಂದಿನ ಎರಡು ಕೋವಿಡ್ ಅಲೆಗಳನ್ನು ಹುಬ್ಬಳ್ಳಿಯ ಕಿಮ್ಸ್ ಸಮರ್ಥವಾಗಿ ಎದುರಿಸಿ, ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಿದೆ.ಈ ಅನುಭವದ ಆಧಾರದಲ್ಲಿ ಪ್ರಸ್ತುತ ಮೂರನೇ ಅಲೆಯನ್ನೂ ಕೂಡ ನಿರ್ವಹಿಸಲು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಅಣಿಗೊಳಿಸಲಾಗಿದೆ.ದಿನದ 24 ಗಂಟೆಗಳ ಕಾಲವೂ ಇಲ್ಲಿ ಸೇವೆಗಳು ಸಿಗಲಿವೆ.

ಆವರಣದ ಮೇಕ್ ಶಿಫ್ಟ್ ಆಸ್ಪತ್ರೆಯ ಒಂದು ಭಾಗದಲ್ಲಿ ಮತ್ತೊಂದು ಸ್ವ್ಯಾಬ್ ಸಂಗ್ರಹಣೆ ಘಟಕ ಕಾರ್ಯಾರಂಭಿಸಿದೆ.ದಿನದ 24 ಗಂಟೆಗಳ ಕಾಲವೂ ಅಲ್ಲಿ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ. ಸಂಶಯಾಸ್ಪದ ಲಕ್ಷಣಗಳಿರುವ ಯಾವುದೇ ವ್ಯಕ್ತಿ ಅಲ್ಲಿಗೆ ಬಂದು ತಪಾಸಣೆಗೆ ಒಳಪಡಬಹುದು.

ಸೋಂಕು ದೃಢಪಟ್ಟ ವ್ಯಕ್ತಿಗಳ ಭೌತಿಕ ತಪಾಸಣೆ(ಫಿಜಿಕಲ್ ಟ್ರಯೇಜಿಂಗ್ ) ಕೈಗೊಳ್ಳಲು ಇದೇ ಮೇಕ್ ಶಿಫ್ಟ್ ಆಸ್ಪತ್ರೆಯ ಒಂದು ಭಾಗದಲ್ಲಿ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿ ಸೋಂಕಿತರನ್ನು ಖುದ್ದಾಗಿ ಪರಿಶೀಲಿಸಿದ ಬಳಿಕ ಅಗತ್ಯಕ್ಕನುಗುಣವಾಗಿ ಹೋಂ ಐಸೋಲೇಷನ್,ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಸೂಚಿಸಲಾಗುವುದು.

ಕಿಮ್ಸ್‌ನ ವೇದಾಂತ ಕೋವಿಡ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಕೋವಿಡ್ ಕ್ಯಾಸುವಲ್ಟಿ ಪ್ರಾರಂಭಿಸಲಾಗಿದೆ. ದಿನದ 24 ಗಂಟೆಗಳ ಕಾಲವೂ ಇಲ್ಲಿ ಕೋವಿಡ್ ಸೋಂಕಿತರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗುತ್ತದೆ.ಬೆಡ್,ವೈದ್ಯಕೀಯ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯ ಪರಿಕರಗಳು ಇಲ್ಲಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ವೈಯಕ್ತಿಕ ಅಂತರ, ಮಾಸ್ಕ್ ಧರಿಸುವಿಕೆ,ಸ್ಯಾನಿಟೈಸರ್ ಬಳಕೆ,ಪದೇ ಪದೇ ಸಾಬೂನಿನಿಂದ ಕೈ ತೊಳೆಯುವ ಮೂಲಕ ಸೋಂಕು ಬಾರದಂತೆ ಪ್ರತಿಯೊಬ್ಬರೂ ಎಚ್ಚರವಹಿಸುವುದು ಅಗತ್ಯವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

Related posts

ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ: ಚುನಾವಾಣಾ ಕರ್ತವ್ಯಲೋಪ: ಗ್ರಾಮ ಆಡಳಿತ ಅಧಿಕಾರಿ ಸುನೀಲ ಇ.ಡಿ. ಅಮಾನತ್ತು: ಡಿಸಿ ಆದೇಶ

eNEWS LAND Team

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team