30 C
Hubli
ಮಾರ್ಚ್ 21, 2023
eNews Land
ಸುದ್ದಿ

ಕೋವಿಡ್‍ನಿಂದ ಬೇರೆ ಜಿಲ್ಲೆ ಆಸ್ಪತ್ರೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೂ ಪರಿಹಾರ: ಕೃಷಿ ಸಚಿವ ಬಿ.ಸಿ.ಪಾಟೀಲ

Listen to this article

ಇಎನ್ಎಲ್ ಹಾವೇರಿ: ಕೋವಿಡ್-19 ಸೋಂಕಿನಿಂದ ಹಾವೇರಿ ಜಿಲ್ಲೆಯವರು ಬೇರೆ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬದವರಿಗೂ ಪರಿಹಾರ ವಿತರಿಸಲಾಗುವುದು. ಅಗತ್ಯ ದಾಖಲಾತಿಗಳೊಂದಿಗೆ ಪರಿಹಾರ ಪಡೆದುಕೊಳ್ಳಿ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು.
ನಗರದ ತಾಲೂಕ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಾವೇರಿ ಹಾಗೂ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕೋವಿಡ್-19 ವೈರಾಣುಯಿಂದ ಮೃತಪಟ್ಟ 96 ಬಿಪಿಎಲ್ ಕುಟುಂಬದವರಿಗೆ ರೂ.ಒಂದು ಲಕ್ಷ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ರೂ.ಒಂದು ಲಕ್ಷದಿಂದ ಜೀವನ ನಿರ್ವಹಣೆ ಸಾಧ್ಯವಾಗುವುದಿಲ್ಲ. ಆದರೂ ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಜೀವನಕ್ಕೆ ಆರ್ಥಿಕವಾಗಿ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಸಹಾಯ ಮಾಡಲಾಗುತ್ತಿದೆ. ದೃತಿಗೆಡದೆ ಧೈರ್ಯದಿಂದ ಜೀವನ ನಡೆಸಿ, ನಮ್ಮ ಸರ್ಕಾರ ಸದಾ ನಿಮ್ಮ ನೆರವಿಗೆ ಇದೆ ಎಂದು ಭರವಸೆ ನೀಡಿದರು.
ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ರೂ.ಒಂದು ಲಕ್ಷ ಹಾಗೂ ಎಪಿಎಲ್ ಕುಟುಂಬದವರಿಗೆ ರೂ.50 ಸಾವಿರ ಪರಿಹಾರ ವಿತರಿಸಲಾಗುವುದು. ಕೋವಿಡ್ ಒಂದನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು. ಆದರೆ ಕೋವಿಡ್ ಎರಡನೇ ಅಲೆಯಲ್ಲಿ ಕೋವಿಡ್ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ 36 ಸಾವಿರ ಜನರು ಹಾಗೂ ಹಾವೇರಿ ಜಿಲ್ಲೆಯಲ್ಲಿ 650 ಜನರು ಮೃತಪಟ್ಟಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ ಅವರು ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ನಡೆದಂತಹ ಅನಾಹುತಗಳನ್ನು ನಾವು ಇನ್ನೂ ಮರೆತಿಲ್ಲ. ಆತ್ಮೀಯರನ್ನು, ಕುಟುಂಬದವರನ್ನು ಕಳೆದುಕೊಂಡಿದ್ದೇವೆ. ಮತ್ತೆ ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚಾಗುತ್ತಿದ್ದು, ಮಕ್ಕಳನ್ನು, ವಯೋವೃದ್ಧರನ್ನು ಮದುವೆ, ಜಾತ್ರೆಗಳಿಗೆ ಕಳುಹಿಸಬಾರದು. ಜ್ವರ, ನೆಗಡಿ ಲಕ್ಷಣ ಕಂಡು ಬಂದರೆ ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಕಡ್ಡಾಯವಾಗಿ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬ್ಯಾಡಗಿ ಶಾಸಕ ವಿರೂಕ್ಷಾಪ್ಪ ಬಳ್ಳಾರಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾಗಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ ಪರಮೇಶಪ್ಪ ಕುಂಬಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ ಇತರರು ಇದ್ದರು.

Related posts

ಧಾರವಾಡದ ನಾಲ್ಕು ಪಿಎಚ್ಸಿ ವ್ಯಾಪ್ತಿಯಲ್ಲಿ ಶೇ.100ರಷ್ಟು ಕೋವಿಡ್ ಮೊದಲ ಡೋಸ್ ಲಸಿಕೆ

eNewsLand Team

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು! ಇಬ್ಬರಿಗೆ‌ ಚಾಕು ಇರಿತ, ಪೊಲೀಸ್ ಬೇಟೆ ಶುರು!!

eNewsLand Team

ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಸಾಂಸ್ಕøತಿಕ ಸ್ಪರ್ಧೆಗಳು ಅಗತ್ಯ: ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ

eNEWS LAND Team