₹ 100 ಕೋಟಿ ಕರ ಸಂಗ್ರಹಣೆ ನಿರೀಕ್ಷೆ / ಎರಡು ತಿಂಗಳಲ್ಲಿ 1 ಲಕ್ಷ ಆಸ್ತಿಗಳ ಇ-ಸ್ವತ್ತು ನೋಂದಣಿ ಗುರಿ
ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 2.81 ಲಕ್ಷ ಆಸ್ತಿಗಳ ಇ- ಸ್ವತ್ತು ನೋಂದಣಿಗೆ ಕ್ರಮ ಕೈಗೊಳ್ಳಲಾಗಿದೆ. ಸಂಪೂರ್ಣವಾಗಿ ಆಸ್ತಿಗಳು ಇ-ಸ್ವತ್ತಿನಡಿ ನೋಂದಣಿಯಾದರೆ ಪಾಲಿಕೆಗೆ 100 ಕೋಟಿ ರೂಪಾಯಿಗಳಿಗೂ ಅಧಿಕ ಕರ ಸಂಗ್ರಹಣೆ ಆಗಲಿದೆ. ಎರೆಡು ತಿಂಗಳಲ್ಲಿ 1 ಲಕ್ಷ ಆಸ್ತಿಗಳನ್ನು ಇ-ಸ್ವತ್ತಿನಡಿ ನೋಂದಣಿ ಮಾಡವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಹುಬ್ಬಳ್ಳಿಯ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಇ- ಸ್ವತ್ತು ನೋಂದಣಿ ಕುರಿತು ಕಂದಾಯ, ಭೂ ಮಾಪನ, ಹಾಗೂ ನೋಂದಣಿ ಇಲಾಖೆ, ಪಾಲಿಕೆ, ಹುಡಾ, ಕ್ರಡಾಯ್, ದಸ್ತಾವೇಜು ಬರಹಗಾರು ಹಾಗೂ ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದರು.
ಇ-ಸ್ವತ್ತು ನೋಂದಣಿಯಲ್ಲಿ ಸುಧಾರಣೆ ಹಾಗೂ ಪಾರದರ್ಶಕತೆ ತರಲಾಗಿದೆ. ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಸಂಖ್ಯೆಯನ್ನು 5ಕ್ಕೆ ಇಳಿಸಲಾಗಿದೆ. ಸೇಲ್ ಡೀಡ್, ಆಸ್ತಿ ಭಾವಚಿತ್ರ, ಮಾಲಿಕರ ಭಾವಚಿತ್ರ, ಚಾಲ್ತಿ ವರ್ಷದ ಕರ ಸಂದಾಯ ಮಾಡಿದ ರಸೀದಿ ಹಾಗೂ ವೈಯಕ್ತಿಕ ಗುರುತಿನ ದಾಖಲೆಗಾಗಿ ಪಾನ್ ಕಾರ್ಡ್, ಆಧಾರ, ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದು ದಾಖಲೆ ನೀಡಬೇಕು. ಇ- ಸ್ವತ್ತು ಮಾಡಿಸುವುದರಿಂದ ಮೋಸ, ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಇ- ಸ್ವತ್ತು ನೋಂದಣಿ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಕರ ಸಂಗ್ರಹಣಕಾರರಿಗೆ ತರಬೇತಿ ನೀಡಲಾಗುವುದು ಎಂದರು.
ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ನೋಂದಣಿಗೆ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪಾಲಿಕೆಯಲ್ಲಿ ಆಸ್ತಿಗಳ ಇ ಸ್ವತ್ತು ಮಾಡುವುದರಿಂದ, ಕಂದಾಯ ಇಲಾಖೆ ಭೂಮಿ ತಂತ್ರಾಂಶದಲ್ಲಿ ಅನಗತ್ಯವಾಗಿ ನೋಂದಣಿ ಮಾಡುವುದು ತಪ್ಪುತ್ತದೆ. ಒಂದು ಆಸ್ತಿಗೆ ಕಂದಾಯ ಹಾಗೂ ಪಾಲಿಕೆಯಲ್ಲಿ ಬೇರೆ ಬೇರೆ ಉತಾರಗಳು ಇದ್ದುದ್ದರಿಂದ, ಒಂದೇ ಆಸ್ತಿಯನ್ನು ಇಬ್ಬರಿಗೆ ಮಾರುವ ಪ್ರಮೇಯಗಳಿದ್ದವು. ಹೊಸದಾಗಿ ನಿರ್ಮಿಸಲಾಗಿರುವ ಲೇಔಟ್ ಗಳಿಗೆ ಕೆಜೆಪಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದಿತ ಮ್ಯಾಪ್ ಆಧರಿಸಿ ಪಾಲಿಕೆಯಿಂದ ಉತಾರ ನೀಡಲಾಗುವುದು. ಅಪಾರ್ಟ್‌ಮೆಂಟ್ ಗಳನ್ನು ಸಹ ಪಾಲಿಕೆಯಲ್ಲಿ ನೋಂದಣಿ ಮಾಡಲಾಗುವುದು. ಇದರಿಂದ ಆಸ್ತಿ ಮಾರಾಟ ಮಾಡುವ ಹಾಗೂ ಕೊಳ್ಳುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬಗ್ಗೆ ಕ್ರಡಾಯ್‌ನಿಂದ ಆಕ್ಷೇಪಣೆಗಳು ಕೇಳಿ ಬಂದಿವೆ. ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದಿತ ವಿನ್ಯಾಸ ಹಾಗೂ ಬಡಾವಣೆಗಳಿಗೆ ಪಾಲಿಕೆಯಿಂದ ಉತಾರ ನೀಡುತ್ತಿಲ್ಲ. ಹೀಗಾಗಿ ಪಾಲಿಕೆ ವ್ಯಾಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನರೇಂದ್ರ, ಚಿಕ್ಕಮಲ್ಲಿಗೆವಾಡ ಮತ್ತು ಅಂಚಟಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿ ಹೊರತು ಪಡಿಸಿ ಡಿಲಿಮಿಟೇಷನ್ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಪಾಲಿಕೆ ಆಯುಕ್ತ ಬಿ.ಗೋಪಾಲಕೃಷ್ಣ ಮಾತನಾಡಿ, ಭೂಮಿ ತಂತ್ರಾಂಶದಲ್ಲಿ ದಾಖಲಾಗುತ್ತಿದ್ದ ಆಸ್ತಿಗಳನ್ನು ಇ ಸ್ವತ್ತಿನಡಿಯಲ್ಲಿ ನೋಂದಣಿ ಮಾಡಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಪಾಲಿಕೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಬಹುದು. ಸೂಕ್ತ ದಾಖಲೆಗಳ ಮೂಲಕ ನೋಂದಣಿ ಮಾಡಿಕೊಂಡ ಮೂರು ದಿನಗಳಲ್ಲಿ ಉತಾರ ನೀಡಲಾಗುವುದು. ಇ ಸ್ವತ್ತಿನಡಿಯಲ್ಲಿ ನೋಂದಣಿ ಬಳಿಕ ವಿವಿಧ ಕೆಲಸಗಳಿಗೆ ಉತಾರ ಬಳಸಬಹುದಾಗಿದೆ. ಬೇರೆ ಮಾಲೀಕರಿಗೆ ಆಸ್ತಿ ಮಾರಾಟ ಮಾಡಲು ಸುಲಭವಾಗಲಿದೆ. ಈಗಾಗಲೇ ಸುಮಾರು 4 ಸಾವಿರಕ್ಕೂ ಅಧಿಕ ಆಸ್ತಿಗಳನ್ನು ಇ ಸ್ವತ್ತಿನಡಿಯಲ್ಲಿ ನೋಂದಣಿಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.100 ರಷ್ಟು ನೋಂದಣಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. 90 ಜನ ಬಿಲ್ ಕಲೆಕ್ಟರ್ ಗಳಿಗೆ ಟಾರ್ಗೆಟ್ ನೀಡಲಾಗುವುದು. ಪ್ರತಿ ಮನೆಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಲು ತಿಳಿಸುವುದರಿಂದ ಪಾಲಿಕೆ ಆದಾಯ ಹೆಚ್ಚಳ ಮಾಡಬಹುದಾಗಿದೆ ಎಂದರು.
ಕ್ರೆಡಾಯ್ ಅಧ್ಯಕ್ಷ ಸಾಜಿದ್ ಐ ಪರಾಶ್ ಇ- ಸ್ವತ್ತು ನೋಂದಣಿಗೆ ಅನುಕೂಲಕವಾಗುವ ನಿಟ್ಟಿನಲ್ಲಿ 6 ಸೆಟ್ ಕಂಪ್ಯೂಟರ್, ಸ್ಕಾಕನರ್, ಪ್ರಿಂಟರ್ ಪಾಲಿಕೆಗೆ ನೀಡುವುದಾಗಿ ಆಶ್ವಾಸನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್, ಜಿಲ್ಲಾ ನೊಂದಣಾಧಿಕಾರಿ ಕೆ.ಅಶೋಕ್, ಪಾಲಿಕೆ ಜಂಟಿ ಆಯುಕ್ತ ಗಿತ್ತೆ ಮಾಧವ ವಿಠ್ಠಲ ರಾವ್, ಹುಡಾ ಆಯುಕ್ತ ನಿಂಗಪ್ಪ ಕುಮ್ಮಣ್ಣವರ್ ,ಹುಬ್ಬಳ್ಳಿ ನಗರ ತಹಶಿಲ್ದಾರರ ಶಶಿಧರ ಮಾಡ್ಯಾಳ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.