36.8 C
Hubli
ಮಾರ್ಚ್ 29, 2024
eNews Land
ಸುದ್ದಿ

ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

ವಿಶೇಷ ವರದಿ: 

ಇಎನ್ಎಲ್ ಹುಬ್ಬಳ್ಳಿ: ಕೋವಿಡ್ ಗುಂಗಿದ್ದ ಹೊರಬರದ ಕಾರಣ ಜನಸಂದಣಿ ತುಸು ಕಡಿಮೆ ಎನ್ನಿಸಿದರೂ ಹುಬ್ಬಳ್ಳಿಯ ರಂಗಪಂಚಮಿ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಓಕಳಿಯ ಆಟದಲ್ಲಿ ವಾಣಿಜ್ಯ ನಗರದಲ್ಲಿ ಮಿಂದೆದ್ದಿತು.

ನಸುಕಿನಲ್ಲಿ ಆರಂಭವಾದ ಬಣ್ಣದ ಮೆರವಣಿಗೆಯಲ್ಲಿ ಅಬಾಲ ವೃದ್ಧರಾಗಿ ಎಲ್ಲರೂ ಸಂಭ್ರಮಿಸಿದರು. ಸಂಬಂಧಿಕರು, ಸ್ನೇಹಿತರ ಮನೆಗೆ‌ ಹೋಗಿ ಬಣ್ಣ ಹಚ್ಚುವುದರಿಂದ ಹಬ್ಬ ಚಾಲನೆ ಪಡೆದಿತ್ತು. ಥರಾವರಿ ರಂಗಿನಲ್ಲಿ ಜನತೆ ಕಳೆದುಹೋಗಿದ್ದರು. ಅತ್ಯುತ್ಸಾಹದ ಹುಮ್ಮಸ್ಸಿನಲ್ಲಿ ಹಬ್ಬ ಆಚರಿಸಿದರು.

ಇದನ್ನೂ ಓದಿ:ರಾಜ ವೈಭವ ನೆನಪಿಸಿದ ಮುಕ್ಕಲ್ಲ ಗ್ರಾಮ ವಾಸ್ತವ್ಯ ಅದ್ಧೂರಿ ಸ್ವಾಗತಕ್ಕೆ ಮನಸೋತ: ಜಿಲ್ಲಾಧಿಕಾರಿ

ಪ್ರಮುಖವಾಗಿ ಹಳೇ ಹುಬ್ಬಳ್ಳಿಯ ಕಮರಿಪೇಟ, ಚೆನ್ನಪೇಟ, ಲತ್ತಿಪೇಟ, ಅವರಾದಿ ಓಣಿ, ಶಿವಶಂಕರ ಕಾಲನಿ, ಆನಂದ ನಗರ, ಹೆಗ್ಗೇರಿ, ಬಂಕಾಪುರ ಚೌಕ, ನೇಕಾರ ನಗರ , ಜಂಗ್ಲಿಪೇಟ, ಅಕ್ಕಿಪೇಟ, ಕೆಬಿ ನಗರ  ಮೇದಾರ ಓಣಿ ಆರೂಢ ನಗರದಲ್ಲಿ ಜನ ಮೈಮರೆತು ಬಣ್ಣದ ಆಟವಾಡಿದರು.

ಇದಲ್ಲದೆ, ಕೊಯಿನ್ ರೋಡ್, ದುರ್ಗದಬೈಲು , ಗೋಕುಲ ರಸ್ತೆ, ಲೋಹಿಯಾ ನಗರ, ವಿದ್ಯಾನಗರ, ನೆಹರು ನಗರ, ನವನಗರ, ಶಿರೂರ ಪಾರ್ಕ್, ದೇಶಪಾಂಡೆ ನಗರ, ಕೇಶ್ವಾಪುರ, ಲಿಂಗರಾಜ ನಗರ ಸೇರಿ ಹಲವೆಡೆ ರಂಗಿನಾಟ ಭರ್ಜರಿಯಾಗಿತ್ತು.

ಇದನ್ನೂ ಓದಿ:ಇಂದು ಪಂ.ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭ

ಯುವಕ, ಯುವತಿಯರು ತಮ್ಮ ಬೈಕುಗಳಲ್ಲಿ ಬಣ್ಣ ಎರಚುತ್ತ ಊರೆಲ್ಲ ಸುತ್ತಿದರು. ಒಳರಸ್ತೆ, ಓಣಿಗಳಲ್ಲಿ ಬಣ್ಣದ ಬುಗ್ಗೆಯೇ ಚಿಮ್ಮಿತ್ತು. ಮನೆಗಳೆದುರು ಕಾರಂಜಿ ಅಳವಡಿಸಿಕೊಂಡು ರೈನ್ ಡ್ಯಾನ್ಸ್ ಮಾಡಿ ಮಹಿಳೆಯರು, ಮಕ್ಕಳು ಎಂಜಾಯ್ ಮಾಡಿದರು. ಭದ್ರತೆಗೆ ಆಗಮಿಸಿದ್ದ ಪೊಲೀಸರಿಗೂ ಬಣ್ಣ ಹಚ್ಚಿ ಖುಷಿ  ಪಟ್ಟರು. ಬಣ್ಣದ ಚೀಲಗಳನ್ನು ಜೋಳಿಗೆಯಂತೆ ಹಾಕಿಕೊಂಡು ತಿರುಗಾಡಿ ರಂಗು ಎರಚಿದರು.

ಹಲಗೆ ಬಡಿಯುತ್ತ, ಕಾಮಣ್ಣನ ಮೆರವಣಿಗೆ ಮಾಡುತ್ತ ಸಾಗಿದ ಜನ ಹೋಳಿಯ ಸಾಂಪ್ರದಾಯಿಕ ಘೋಷಣೆ ಕೂಗುತ್ತ ಸಾಗಿದರು. ಕಾಮಣ್ಣನ ಮಕ್ಕಳು ಕಳ್ಳಸುಳೆಮಕ್ಕಳು, ಏನೆನ್ ಕದ್ದರು ಕಟ್ಟಿಗೆ ಕುಳ್ಳು ಕದ್ದರು..ಎನ್ನುತ್ತ ಲಬೋ ಲಬೋ ಹೊಯ್ಕೊಳ್ಳುವುದು ಹೆಚ್ಚು ಮಜಾ ಕಂಡಿತು.

ಇದನ್ನೂ ಓದಿ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತ

ವರ್ಷ ಹಂಗಾತು, ಈ ವರ್ಷ ಹಿಂಗಾತು, ಜೋಳದ ಹೋಲದಾಗ ಕೆಲಸಾತು ಎನ್ನುವ ಕಾಮಣ್ಣನ ಪದಗಳನ್ನು ಹಾಡಿಕೊಂಡು ಸಾಗಿದರು. ತಲೆ ಮೇಲೆ ತತ್ತಿ ಒಡೆಯುವುದು, ಮಕ್ಕಳು ವಾಟರ್ ಬಾಲ್ ಎಸೆಯುವುದು, ಪಿಚಕಾರಿ ಸಿಡಿಸುವುದು, ಥರ ಥರದ ಮುಖವಾಡ ಹಾಕಿಕೊಂಡು ಓಡಾಡಿದರು.

ಮಧ್ಯಾಹ್ನ ಒಂದು ಗಂಟೆ ಬಳಿಕ ಎಲ್ಲೆಡೆ ಕಾಮಣ್ಣನ ಮೆರವಣಿಗೆ ಆರಂಭವಾಯಿತು. ಪ್ರತಿಷ್ಠಾಪಿಸಿದ್ದ ರತಿ ಮನ್ಮಥರನ್ನು ಟಂಟಂ, ತಳ್ಳುಗಾಡಿಯಲ್ಲಿ , ಚಕ್ಕಡಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.  ಹಳೇ ಹುಬ್ಬಳ್ಳಿಯಲ್ಲಿ ಚೆನ್ನಪೇಟ  ಮಾರ್ಗವಾಗಿ ಬಹುತೇಕ ಎಲ್ಲಾ ಕಾಮಣ್ಣನ ಮೆರವಣಿಗೆ ಸಾಗಿತು. ಹಳೇ ಹುಬ್ಬಳ್ಳಿ ನೀಲಕಂಠಮಠದ ಬಳಿ ಸಾಗಿ ಆಯಾ ಓಣಿಗೆ ಸಾಗಿತು. ಬಳಿಕ ಎಲ್ಲಾ ಗಲ್ಲಿಗಳಲ್ಲಿ ಮನೆಮನೆಗಳಿಂದ ಸಂಗ್ರಹಿಸಿದ್ದ ಕಟ್ಟಿಗೆ ಕುಳ್ಳುಗಳನ್ನು ಒಂದೆಡೆ ಸೇರಿಸಿ ಕಾಮದಹನಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.

ಮೂರು ಗಂಟೆ ಬಳಿಕ ಆಯಾ ಓಣಿಗಳಲ್ಲಿ ಕಾಮದಹನ ಪ್ರಾರಂಭವಾಯಿತು. ಕಾಮಣ್ಣನನ್ನು ಚಿತೆಯಲ್ಲಿ ಸ್ಥಾಪಿಸಿ ಪೂಜಿಸಲಾಯಿತು. ಬಳಿಕ ಪ್ರಮುಖರು ಕಿಚ್ಚಿಟ್ಟರು. ಬೆಂಕಿ ಧಗಿಧಗಿಸುತ್ತಿದ್ದಂತೆ ಬಣ್ಣವಾಡಿದ್ದ ಮೇಲಂಗಿಯನ್ನು ಅಗ್ನಿಗೆ ಅರ್ಪಿಸಿದರು. ಉಣಕಲ್ ಕೆರೆ ಸೇರಿದಂತೆ ಹಲವೆಡೆ ತೆರಳಿ ಜಳಕ ಮಾಡಿ ಮನೆ ಸೇರಿ ” ಹೊಯ್ಕೊಂಡಾರ್ ಬಾಯಿಗೆ ಹೋಳಿಗೆ ತುಪ್ಪ” ಎಂಬ ಮಾತು ನೆನೆಯುತ್ತ ಹಬ್ಬದೂಟ ಸವಿದರು.. ಅಲ್ಲಿಗೆ ವರ್ಷದ ರಂಗಪಂಚಮಿ ಮುಕ್ತಾಯವಾಯಿತು.

ಇದನ್ನೂ ಓದಿ:ದಿ.ಶಿವಳ್ಳಿ ಆದರ್ಶ ರಾಜಕಾರಣಿ, ಅಧಿಕಾರ ಇರಲಿ, ಇಲ್ಲದಿರಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ: ಮಾಜಿ ಸಿಎಂ ಸಿದ್ರಾಮಯ್ಯ

ಹೋಳಿ‌ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿಸಿ ಕ್ಯಾಮರಾಗಳ ಮೂಲಕ ಜನರ ಚಲನವಲನಗಳ ಮೇಲೆ ನಿಗಾ ಇಡಲಾಯಿತು. ಕೆಎಸ್’ಆರ್’ಪಿ, ಆರ್’ಎಎಫ್, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸರು, ಸ್ಥಳೀಯ ಪೊಲೀಸರು ಸೇರಿ ಭದ್ರತೆ ಒದಗಿಸಿದರು. ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ್ ನಿರಂತರ ಗಸ್ತು ತಿರುಗಿದರು. ಅಲ್ಲಲ್ಲಿ ಸಣ್ಣಪುಟ್ಟ ವರಾತ ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಎಲ್ಲಿಯೂ ಜನ ಗುಂಪುಗೂಡಿ ಅಪರಾಧ ನಡೆಯದಂತೆ ನೋಡಿಕೊಂಡರು.

ಇದನ್ನೂ ಓದಿ:ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

ಈಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನು ಬೈಕು, ಆಟೋರಿಕ್ಷಾಕ್ಕೆ ಕಟ್ಟಿಕೊಂಡು, ಕನ್ನಡ ಧ್ವಜ ಹಿಡಿದು ಯುವಕರು ಅಪ್ಪು ಚಿರಾಯು ಎಂದು ಘೋಷಣೆ ಕೂಗಿದರು.

ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ್ದ ಸಾವಿರಾರು ಜನರು ಸೆಲ್ಫೀ, ಫೋಟೊ ಕ್ಲಿಕ್ಕಿಸಿಕೊಂಡು ಹೋಳಿಯ ನೆನಪನ್ನು ಚಿರಸ್ಥಾಯಿಯಾಗಿ  ಉಳಿಸಿಕೊಂಡರು.

Related posts

ಧಾರವಾಡ ಜಿಲ್ಲೆಯ ವನಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಗ್ರಾಮ  ವಾಸ್ತವ್ಯ

eNEWS LAND Team

ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡ ಸಿಇಓ ಭೂಬಾಲನ್

eNEWS LAND Team

ಅಣ್ಣಿಗೇರಿ:ತಾಲೂಕಿನಾದ್ಯಾಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಕಾರ್ಯಕ್ರಮಕ್ಕೆ ಚಾಲನೆ

eNewsLand Team