ಇಎನ್ಎಲ್ ಧಾರವಾಡ: ರಾಸುಗಳಿಗೆ ಮೇವು ತರಲು ಹೊಲಕ್ಕೆ ಹೊರಟ ವೇಳೆ ಎತ್ತುಗಳು ಏಕಾಏಕಿ ಓಡಿದ ಕಾರಣ ಶಾಸಕಿ ಕುಸುಮಾವತಿ ಶಿವಳ್ಳಿ ಸಂಬಂಧಿ ರೈತ ಮಹಿಳೆ ಚಕ್ಕಡಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಅಣ್ಣಿಗೇರಿಯ ಅಡ್ನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅಡ್ನೂರ್ ಗ್ರಾಮದ ನಿವಾಸಿ ನೀಲವ್ವ ಬಸವರಾಜ್ ಕಲ್ಲನವರ (42) ಮೃತರು. ನಾಗರಾಜ್ ಬಸವರಾಜ್ ಕಲ್ಲನವರ (22) ಮತ್ತು ಬಸವರಾಜ್ ಕಲ್ಲನವರ(58) ಗಂಭೀರ ಗಾಯಗೊಂಡಿದ್ದಾರೆ.
ಇವರೆಲ್ಲರೂ ಮೇವು ತರಲು ತಮ್ಮ ಹೊಲಕ್ಕೆ ತೆರಳಿದ್ದರು. ಗ್ರಾಮ ಬಿಟ್ಟು ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಂತೆ ಎತ್ತುಗಳು ಓಡಲಾರಂಭಿಸಿವೆ. ಅವನ್ನು ನಿಯಂತ್ರಣ ಮಾಡಲಾಗಲಿಲ್ಲ. ಪೂಲಿನ ಕಟ್ಟಿಯ ಮೇಲೆ ಗಾಲಿ ಹತ್ತಿದ ಕಾರಣ ರೈತ ಮಹಿಳೆ ಚಕ್ಕಡಿಯಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡ ತಂದೆ ಮತ್ತು ಮಗನ ನವಲಗುಂದ ಸರ್ಕಾರಿ ಆಸ್ಪತ್ರೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ಕರೆದೊಯ್ಯಲಾಗಿದೆ.
ಸ್ಥಳಕ್ಕೆ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಿ ಶಾಸಕಿ ಕುಸುಮಾ ಶಿವಳ್ಳಿ ಕೂಡ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.