37 C
Hubli
ಮಾರ್ಚ್ 28, 2024
eNews Land
ಸುದ್ದಿ

ಬಿಎಸ್’ವೈ ಜಲರಕ್ಷಣೆ ನೀಡಿದ ಆಧುನಿಕ ಭಗೀರಥ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ದೂರದ ಜಲಾಶಯಗಳಿಂದ ಕೆರೆಗಳನ್ನು ತುಂಬಿಸಿ ಅಂತರ್ಜಲವನ್ನು ಹೆಚ್ಚಿಸುವ ಮೂಲಕ ರೈತರಿಗೆ ಶಿಕಾರಿಪುರ ದಲ್ಲಿ ಜಲರಕ್ಷಣೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಧುನಿಕ ಭಗೀರಥ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಅವರು ಇಂದು ಶಿಕಾರಿಪುರದಲ್ಲಿ ಬರದ ನಾಡಿಗೆ ತುಂಗಭದ್ರೆ ನೀರನ್ನು ಹರಿಸಿದ ಭಗೀರಥ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ‘ ರೈತಾಭಿಮಾನ ಅಭಿನಂದನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸಾಮಾಜಿಕ ಹಾಗೂ ಪ್ರಾದೇಶಿಕ ಸಮಾನತೆ ಸಾಧಿಸಿ, ಎಲ್ಲರಿಗೂ ನೆಮ್ಮದಿಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಮೂಲಕ ಕರ್ನಾಟಕವನ್ನು ಸುಭಿಕ್ಷವಾಗಿಸಿ ಮಾದರಿ ರಾಜ್ಯವನ್ನಾಗಿಸಿ ಬಿ.ಎಸ್.ಯಡಿಯೂರಪ್ಪನವರ ಆಶಯವನ್ನು ಈಡೇರಿಸುವ ಸಂಕಲ್ಪ ನಮ್ಮದು ಎಂದು ನುಡಿದರು.

ಸಮಾಜದ ದೀನದಲಿತರಿಗೆ, ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ ಎಲ್ಲರಿಗೂ ಸಮಾನತೆ, ಸಮಾನ ಅವಕಾಶವನ್ನು ನೀಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಅವಕಾಶ, ಸಹಕಾರಗಳನ್ನು ನೀಡಿದಾಗ ಅವರ ದುಡಿಮೆ ಹೆಚ್ಚಿ ರಾಜ್ಯದ ಆದಾಯವೂ ಹೆಚ್ಚಾಗುತ್ತದೆ. ಶಿಕಾರಿಪುರದಲ್ಲಿ 10 ಗ್ರಾಮದ 250 ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ದೊರೆತಿದೆ. ರೈತರ ದುಡಿಮೆಗೆ ನೀರಾವರಿ ಯೋಜನೆಗಳು ಸೇರಿ ಬಂಗಾರದ ಬೆಳೆ ಬೆಳೆಯುವಂತಾಗಬೇಕು. ನಾಡಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಭಗೀರತ ಪ್ರಯತ್ನಕ್ಕಾಗಿ ಈ ಭಗೀರಥನ ಆರ್ಶೀರ್ವಾದ ಹಾಗೂ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.

ದೂರದೃಷ್ಟಿಯ ಮುತ್ಸದ್ದಿ ನಾಯಕ :
ಸಾಮಾಜಿಕ ಚಿಂತನೆಯನ್ನು ಹೊಂದಿದ ಬಿಎಸ್ ವೈ ಅವರು ಭಾಗ್ಯಲಕ್ಷ್ಮಿ ಯೋಜನೆ, ಹೆಣ್ಣುಮಕ್ಕಳಿಗೆ ಸೈಕಲ್ , ಸಂದ್ಯಾ ಸುರಕ್ಷಾ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಜನರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಬಿಎಸ್ ವೈ ಅವರ ಮಾರ್ಗದರ್ಶನದಿಂದ ಬರುವ ದಿನಗಳಲ್ಲಿ ಸುಭಿಕ್ಷ ನಾಡು ಹಾಗೂ ಪಕ್ಷವನ್ನು ಕಟ್ಟುವಂತಾಗಲಿ ಎಂದು ಹಾರೈಸಿದರು.

ದೀನದಲಿತ ಬಗ್ಗೆ ಕಾಳಜಿ:
ಶಿಕಾರಿಪುರದ ಎಲ್ಲರ ಮನೆಮನದಲ್ಲಿ ಯಡಿಯೂರಪ್ಪನವರು ನೆಲೆಸಿದ್ದಾರೆ. ‘ಬಿಎಸ್ ವೈ ಅವರು ಬಿಗಿಯಾಗಿ ಕಂಡರೂ, ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ.

ನೀರಾವರಿ ಯೋಜನೆಗಳಿಗೆ ಕಾಯಕಲ್ಪ :
ಅವರ ಜೊತೆ ಕೆಲಸ ಜಲಸಂಪನ್ಮೂಲ ಸಚಿವನಾಗಿ ದುಡಿದ ಅನುಭವವಿದೆ. ನೀರಾವರಿ ಯೋಜನೆಗೆ ಕಾಯಕಲ್ಪ ಒದಗಿಸುವ ಮುಕ್ತ ಅವಕಾಶವನ್ನು ಹಾಗೂ ಮಾರ್ಗದರ್ಶನವನ್ನು ನೀಡಿದ್ದರು. ಅವರ ಆಡಳಿತಾವಧಿಯಲ್ಲಿ ಸುಮಾರು 7.50 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿದ್ದು ಅವರ ದೂರದೃಷ್ಟಿಯಿಂದ. ತುಂಗಾ ಮೇಲ್ದಂಡೆ ಯೋಜನೆಯಿಂದ ಶಿವಮೊಗ್ಗ ಜಿಲ್ಲೆಗೆ ನೀರು, ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸುವ ಬೃಹತ್ ಯೋಜನೆಗೆ ಪ್ರಾರಂಭ ಮಾಡಿದ್ದರು, ಈ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆಯಾಗುತ್ತಿರುವ ಸಂಪೂರ್ಣ ಶ್ರೇಯಸ್ಸು ಬಿಎಸ್ ವೈ ಅವರಿಗೆ ಸಲ್ಲುತ್ತದೆ. ದೂರದೃಷ್ಟಿಯುಳ್ಳ ನಾಯಕನಿಗೆ ಆಡಳಿತ ಸಿಕ್ಕಾಗ ರಾಜ್ಯ ಅಭಿವೃದ್ಧಿಯನ್ನು ಕಾಣುತ್ತದೆ ಎಂಬುದನ್ನು ಅವರು ನಿರೂಪಿಸಿದ್ದಾರೆ .ನಾಡಿನ ಮೂಲೆ ಮೂಲೆಯಲ್ಲಿ ಬಿ ಎಸ್ ವೈ ಅವರು ಮಾಡಿದ ಕೆಲಸಗಳು ಮಾತನಾಡುತ್ತಿವೆ ಎಂದು ತಿಳಿಸಿದರು.

ಮಹಾನ್ ನಾಯಕ:

ಯಾವುದೇ ಕೆಲಸ ಅವರ ಮನಸ್ಸಿಗೆ ಬಂದರೆ ಅವರು ಮಾಡಿಯೇ ತೀರುತ್ತಾರೆ. ಒಬ್ಬ ನಾಯಕನಿಗಿರಬೇಕಾದ ಸೂಕ್ಮತೆ ಅವರಲ್ಲಿ ಕಾಣಬಹುದು. 2008 ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನಡೆದ ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ವಿದ್ಯುತ್ ನೀಡುವ ಕಡತಕ್ಕೆ ಸಹಿ ಹಾಕಿದರು. ನಂತರ 2019 ರಲ್ಲಿ ಮುಖ್ಯಮಂತ್ರಿಯಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ 6000 ರೂ.ಗಳಿಗೆ ರಾಜ್ಯ ಸರ್ಕಾರ 4000 ರೂ.ಗಳನ್ನು ಸೇರಿಸಿ ನೀಡುವ ತೀರ್ಮಾನವನ್ನು ಮಾಡಿದರು. 58 ಲಕ್ಷ ರೈತರಿಗೆ ಇದರ ಪ್ರಯೋಜನವಾಗಿದೆ. ರೈತನ ಪರವಾಗಿ ಅವರ ಮನಸ್ಸು ಮಿಡಿಯುತ್ತದೆ. ಇಂಥ ನಾಯಕನನ್ನು ಪಡೆದ ಈ ಕ್ಷೇತ್ರದ ಜನರು ಭಾಗ್ಯವಂತರು ಎಂದರು. ಪರಸ್ಪರರ ಮೇಲೆ ಆಶೀರ್ವಾದ ಸದಾ ಕಾಲ ಇರಬೇಕು. ಇಂದು ನಾನು ಮುಖ್ಯಮಂತ್ರಿಯಾಗಿದ್ದು, ರಾಜಕಾರಣದಲ್ಲಿ ಬೆಳವಣಿಗೆಯಾಗಿದ್ದರೆ ಅದು ಬಿ.ಎಸ್.ಯಡಿಯೂರಪ್ಪ ಅವರ ಮನಸ್ಪೂರ್ವಕ ಆರ್ಶೀವಾದದಿಂದ ಎಂದರು.

ಇಂಥ ಒಬ್ಬ ಮಹಾನ್ ನಾಯಕ ಹುಡುಕಿದರೂ ಸಿಗುವುದಿಲ್ಲ. ಅವರ ಕಳಕಳಿ, ಉದ್ದೇಶ ಎಂದೂ ವೈಯಕ್ತಿಕವಲ್ಲ. ರಾಜ್ಯ ಮತ್ತು ಪಕ್ಷಕ್ಕೆ ಒಳಿತಾಗಬೇಕು ಎನ್ನುವುದು ಅವರ ಧ್ಯೇಯ. ತಮ್ಮ ಸ್ಥಾನವನ್ನು ಬಿಟ್ಟರೂ ಸಹ ಪಕ್ಷ ಕಟ್ಟುವ ಛಲ ಅವರಲ್ಲಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ನಮ್ಮ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ಅವರು ಹಾಕಿಕೊಟ್ಟ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಾ ಇನ್ನಷ್ಟು ಶಕ್ತಿಯನ್ನು ತುಂಬುತ್ತಾ ಮುನ್ನಡೆಯುತ್ತಿದ್ದೇವೆ. ಬಜೆಟ್ನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅವರು ಕೋವಿಡ್ ನಿರ್ವಹಣೆಯ ರೀತಿ ಕಾರಣ. ನಮ್ಮ ರಾಜ್ಯ ಕೋವಿಡ್ ನಿಂದ ಬೇಗ ಹೊರಬರಲು ಅವರ ದೂರದೃಷ್ಟಿ ಶ್ರಮ, ಮತ್ತು ಎಲ್ಲರನ್ನೂ ತೆಗೆದುಕೊಂಡು ಹೋಗುವ ಕೆಲಸದಿಂದ ಆಗಿದೆ. ಆರ್ಥಿಕ ಶಿಸ್ತು ನಿಭಾಯಿಸಿದ್ದು, ಈ ಬಾರಿಯ ಬಜೆಟ್ನಲ್ಲಿ ಹೊಸ ದೃಷ್ಟಿಕೋನವನ್ನು ನೀಡಿದ್ದೇವೆ ಎಂದರು.

Related posts

ರೈಲುಗಳ ಸೇವೆಯಲ್ಲಿ ಬದಲಾವಣೆ

eNEWS LAND Team

ಅಂಗವಿಕರಿಗೆ ತ್ರಿಚಕ್ರ ವಾಹನ ವಿತರಿಸಿದ: ಶಾಸಕಿ ಕುಸುಮಾವತಿ

eNEWS LAND Team

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು! ಇಬ್ಬರಿಗೆ‌ ಚಾಕು ಇರಿತ, ಪೊಲೀಸ್ ಬೇಟೆ ಶುರು!!

eNewsLand Team