27 C
Hubli
ಮೇ 25, 2024
eNews Land
ದೇಶ ರಾಜ್ಯ ವಿದೇಶ ಸುದ್ದಿ

ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ: ಕನ್ನಡಿಗರ ರಕ್ಷಣೆ ಮಾಡುವಂತೆ ಕಸಾಪ ಆಗ್ರಹ

ಇಎನ್ಎಲ್ ಬೆಂಗಳೂರು: ಆಫ್ರಿಕಾ ರಾಷ್ಟ್ರದ ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಣ ಸಂಘರ್ಷ ತೀವ್ರಗೊಂಡಿದ್ದು, ಅಲ್ಲಿ 31 ಕನ್ನಡಿಗರೂ ಸಿಲುಕಿ ಸಂಕಷ್ಟದಲ್ಲಿದ್ದಾರೆ ಎನ್ನುವ ವರದಿ ಬರುತ್ತಿದ್ದು, ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ವಿದೇಶಾಂಗ ಇಲಾಖೆ ಮುಂದಾಗಬೇಕು. ಇದಕ್ಕೆ ಸುಡಾನ್‌ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಸಹಾಯವನ್ನು ಪಡೆದುಕೊಂಡು ಕನ್ನಡಿಗರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಕೋರಿದ್ದಾರೆ.

ಕರ್ನಾಟಕದಿಂದ ಸುಡಾನ್‌ಗೆ ತೆರಳಿದ 31 ಮಂದಿ ಅಪಾಯದಲ್ಲಿ ಸಿಲುಕಿರುವ ಮಾಹಿತಿ ಬಂದಿದೆ. ಅಲ್ಲಿಗೆ ತೆರಳಿರುವ ಕನ್ನಡಿಗರೆಲ್ಲರೂ ರಾಜ್ಯದ ಹಕ್ಕಿ ಪಿಕ್ಕಿ ಜನಾಂಗದವರಾಗಿದ್ದಾರೆ. ಹಕ್ಕಿ ಪಿಕ್ಕಿ ಸಮುದಾಯದ ಜನರು ಸುಡಾನ್ ದೇಶದಲ್ಲಿ ಆಯುರ್ವೇದ ಔಷಧ, ಗಿಡ ಮೂಲಿಕೆ ಹಾಗೂ ನಾಟಿ ಔಷಧ ಮಾರಾಟಕ್ಕಾಗಿ ಪ್ರತಿ ವರ್ಷ ಆಫ್ರಿಕಾದ ಹಲವು ದೇಶಗಳಿಗೆ ಭೇಟಿ ನೀಡುತ್ತಾರೆ. ಕೆಲವು ತಿಂಗಳ ಕಾಲ ಅಲ್ಲಿಯೇ ಇದ್ದು ತಮ್ಮ ವ್ಯಾಪಾರವನ್ನು ಮಾಡುತ್ತಾರೆ. ಈ ಪರಿಪಾಠವನ್ನು ಈ ಜನರು ಹಲವು ದಶಕಗಳಿಂದ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ಕೂಡಾ ಆಫ್ರಿಕಾದ ಹಲವು ದೇಶಗಳಿಗೆ ಹಕ್ಕಿ ಪಿಕ್ಕಿ ಜನರು ಹೋಗಿದ್ದು, ಈ ಪೈಕಿ ಸುಡಾನ್‌ಗೆ ತೆರಳಿದ್ದ 31 ಜನರು ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೇ ದಿಢೀರ್ ಅರಂಭವಾದ ಸಂಘರ್ಷದಿಂದಾಗಿ ದಿಕ್ಕು ತೋಚದಂತಾಗಿರುವ ಅವರನ್ನು ಆದಷ್ಟು ಬೇಗ ತವರಿಗೆ ವಾಪಸ್ ಕರೆಸಿಕೊಳ್ಳಬೇಕಿದೆ. ಜೊತೆಗೆ ಅಲ್ಲಿ ಅವರ ಸುರಕ್ಷತೆ ಬಗ್ಗೆಯೂ ಜವಾಬ್ದಾರಿ ವಹಿಸಬೇಕಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ,
ಸುಡಾನ್‌ ನಲ್ಲಿ ಸಿಲುಕಿದ ಕನ್ನಡದ ಹಕ್ಕಿ ಪಿಕ್ಕಿಜನಾಂಗದ ಜನರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ ಆಹಾರ ಸಿಗುತ್ತಿಲ್ಲ. ನಿರಂತರವಾಗಿ ಗುಂಡಿನ ದಾಳಿ, ಕ್ಷಿಪಣಿ ದಾಳಿ, ಬಾಂಬ್ ದಾಳಿಯ ಸದ್ದಿಗೆ ಅವರು ಹೆದರಿದ್ದಾರೆ. ತಾವು ನೆಲೆಸಿದ್ದ ಮನೆಯ ಅಕ್ಕಪಕ್ಕದ ನಿವಾಸಿಗಳ ಬಳಿ ಕಾಡಿ ಬೇಡಿ ಆಹಾರ, ನೀರು ಪಡೆದಿರೋದಾಗಿ ಹಕ್ಕಿ ಪಿಕ್ಕಿ ಜನರು ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ನೀಡಿದ್ದಾರೆ. ಸುಡಾನ್‌ ನ ರಾಜಧಾನಿ ಖಾರ್ಟೋನ್‌ ಪ್ರದೇಶದಲ್ಲಿ ಕನ್ನಡದ ಈ ಜನಾಂಗದವರು ಸಿಲುಕಿಹಾಕಿಕೊಂಡಿದ್ದು ಅವರಿಗೆ ಆಹಾರ ನೀರು ಸಿಗುತ್ತಿಲ್ಲ ಎನ್ನುವ ವರದಿಗಳು ಬಿತ್ತರವಾಗುತ್ತಿದೆ. ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳುವ ಮಾತನ್ನು ಹೇಳಿದ್ದಾರೆ. ಆದರೂ ಕನ್ನಡಿಗರ ರಕ್ಷಣೆಯ ಕೆಲಸ ಮೊದಲ ಆದ್ಯತೆಯ ಮೇರೆಗೆ ಮಾಡಬೇಕು. ಭಾರತೀಯ ರಾಯಭಾರಿ ಕಚೇರಿ ತುರ್ತು ಕ್ರಮ ಕೈಗೊಂಡು ಕನ್ನಡಿಗರ ರಕ್ಷಣೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಳಕಳಿಯಿಂದ ಆಗ್ರಹಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Related posts

 ಕೊರೋನಾ ವಾರಿಯರ್ಸ್’ಗಳಿಗೆ ಸನ್ಮಾನ: ಮಾಜಿ ಸಚಿವ ಸಂತೋಷ್ ಲಾಡ್

eNEWS LAND Team

ಜೂನ್ 22ರಿಂದ ಬಿಜೆಪಿ 7 ತಂಡಗಳ ಪ್ರವಾಸ: ಎನ್.ರವಿಕುಮಾರ್

eNewsLand Team

ರೈಲು ಸೇವೆಯ ರದ್ದತಿ / ಭಾಗಶಃ ರದ್ದತಿ ಹಾಗೂ ನಿಯಂತ್ರಣ

eNEWS LAND Team