31 C
Hubli
ಏಪ್ರಿಲ್ 26, 2024
eNews Land
ದೇಶ ರಾಜಕೀಯ

ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ – ಅರುಣ್ ಸಿಂಗ್

ಇಎನ್ಎಲ್ ಬೆಂಗಳೂರು: ಪಕ್ಷವನ್ನು ಬಿಟ್ಟು ಹೋಗುವವರಿಗೆ ಸದ್ಯಕ್ಕೆ ಮತ್ತೆ ಪಕ್ಷದ ಬಾಗಿಲು ತೆರೆಯುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಎಚ್ಚರಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿಯವರಿಗೆ ಉಪಮುಖ್ಯಮಂತ್ರಿ, ವಿಧಾನಪರಿಷತ್ ಸ್ಥಾನ ನೀಡಲಾಯಿತು. ಅಲ್ಲದೆ ಪಕ್ಷದ ಉನ್ನತ ಸಮಿತಿಗಳಲ್ಲೂ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷ ಬಿಡಲು ಮುಂದಾಗಿದ್ದಾರೆ. ಇದರ ಕುರಿತು ಅವರೇ ಯೋಚಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಸೇರಿದರೆ ಮುಂದೆ ಅವರೇ ಪಶ್ಚಾತ್ತಾಪ ಪಡುತ್ತಾರೆ. ಬಿಜೆಪಿ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರು ಶಾಸಕ, ಸಂಸದರಾಗದೇ ಕೆಲಸ ಮಾಡುತ್ತಲೇ ಇದ್ದಾರೆ. ಟಿಕೆಟ್ ಸಿಗದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಆದರೆ, ಉನ್ನತ ಸ್ಥಾನಗಳನ್ನು ಪಡೆದರೂ ಸ್ವಾರ್ಥಕ್ಕಾಗಿ ಪಕ್ಷ ತೊರೆಯುವುದನ್ನು ಜನರು, ಮತದಾರರು ಮರೆಯುವುದಿಲ್ಲ ಎಂದು ತಿಳಿಸಿದರು.
ಐದಾರು ಮಂದಿ ಪಕ್ಷ ತೊರೆದರೂ ನಷ್ಟವೇನಿಲ್ಲ. ಆದರೆ, ಪಕ್ಷವನ್ನು ತೊರೆದರೆ ಸದ್ಯಕ್ಕೆ ಮತ್ತೆ ಅಂತವರಿಗೆ 20 ವರ್ಷ ಪಕ್ಷದ ಬಾಗಿಲು ಬಂದ್ ಆಗಿರುತ್ತದೆ ಎಂದು ಹೇಳಿದರು.

ಬಿಜೆಪಿಗೆ ಐತಿಹಾಸಿಕ ಗೆಲುವು; ಕಾಂಗ್ರೆಸ್ 3 ಭಾಗ
ಮಹತ್ವದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಐತಿಹಾಸಿಕ ಗೆಲುವು ದಾಖಲಿಸಲಿದ್ದು, ಕಾಂಗ್ರೆಸ್ ಐತಿಹಾಸಿಕ ಸೋಲು ಅನುಭವಿಸಲಿದೆ. ಚುನಾವಣೆ ನಂತರ ಮೂರು ಭಾಗಗಳಾಗಿ ಒಡೆಯಲಿರುವ ಕಾಂಗ್ರೆಸ್, ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯಲಿದೆ ಎಂದು ಅರುಣ್ ಸಿಂಗ್ ಅವರು ವಿಶ್ವಾಸದಿಂದ ನುಡಿದರು.

ಕಾಂಗ್ರೆಸ್ ಪಕ್ಷ ಬಡವರು, ಶೋಷಿತರು ಮತ್ತು ವಂಚಿತರ ಅಭಿವೃದ್ಧಿ ಮಾಡಲಿಲ್ಲ. ಗರೀಬಿ ಹಠಾವೋ ಎಂದು ಹೇಳುತ್ತಲೇ ಬಂದು ಜನರನ್ನು ದಾರಿ ತಪ್ಪಿಸಿದೆ. ರಾಜ್ಯ ಬಿಜೆಪಿ ಸರ್ಕಾರ ಎಸ್‍ಸಿ-ಎಸ್‍ಟಿ ಸಮುದಾಯಗಳಿಗೆ ಹೆಚ್ಚಿಸಿದ ಮೀಸಲಾತಿಯನ್ನು ರದ್ದುಪಡಿಸುವುದಾಗಿಯೂ ಹೇಳುತ್ತಿದೆ. ಆದರೆ, ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರು, ಶೋಷಿತರು, ವಂಚಿತರನ್ನು ಒಟ್ಟಾಗಿ ಕೊಂಡೊಯ್ಯುತ್ತಿದ್ದು, ಇವರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.
ಜನಧನ್, ಪಿಎಂ ಆವಾಸ್, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಯೋಜನೆಗಳಿಂದ ಬಡವರಿಗೆ ಪ್ರಯೋಜನವಾಗುತ್ತಿದೆ. ರಾಜ್ಯದಲ್ಲಿ 39 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಪೂರಕ ಸರ್ಕಾರವಾಗಿ ಕೆಲಸ ಮಾಡಿದ್ದು, ಮುಂದೆಯೂ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಿಜೆಪಿ ಸೂಕ್ತ ಗೌರವ ಸಲ್ಲಿಸಿದೆ. ಎನ್‍ಡಿಎ ಸರ್ಕಾರದಲ್ಲಿ ಅವರಿಗೆ ಭಾರತರತ್ನ ನೀಡಲಾಯಿತು. ನರೇಂದ್ರ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ಸ್ಮಾರಕಗಳನ್ನಾಗಿ ಮಾಡಲಾಯಿತು. ಅವರನ್ನು ಗೌರವಿಸಲು ಸಂವಿಧಾನ ದಿನ ಆಚರಿಸಲಾಯಿತು. ಆದರೆ, ಕಾಂಗ್ರೆಸ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಅವರನ್ನು ಗೌರವಿಸುವ ಯಾವ ಕೆಲಸವನ್ನೂ ಮಾಡಲಿಲ್ಲ ಎಂದು ಅರುಣ್ ಸಿಂಗ್ ಟೀಕಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಬಿಜೆಪಿ ಇಂದು ರಾಜ್ಯದ ಎಲ್ಲ ಜಿಲ್ಲಾ ಮಟ್ಟಗಳಲ್ಲಿ, 313 ಮಂಡಲಗಳಲ್ಲಿ, 44 ಸಾವಿರ ಬೂತ್ ಮಟ್ಟಗಳಲ್ಲಿ ಆಚರಿಸಲಾಗಿದೆ ಎಂದು ತಿಳಿಸಿದರು.
ಎಐಸಿಸಿಗೆ ದಲಿತ ಸಮುದಾಯದವರೇ ಅಧ್ಯಕ್ಷರಾಗಿದ್ದು, ಎಷ್ಟು ಬೂತ್ ಗಳಲ್ಲಿ ಆಚರಿಸಲಾಗಿದೆ ಎಂಬುದನ್ನು ಆ ಪಕ್ಷವೇ ಹೇಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜ್ಯದಲ್ಲಿ ಪಾದಸ್ಪರ್ಶ ಮಾಡಿದ ಜಾಗಗಳನ್ನು ಅಭಿವೃದ್ಧಿ ಪಡಿಸಲು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕ್ರಮ ತೆಗೆದುಕೊಂಡಿದೆ. ಗುತ್ತಿಗೆ ಸೇವೆಗಳಲ್ಲೂ ಮೀಸಲಾತಿ ಪರಿಪಾಲಿಸಲು ಆದೇಶ ಹೊರಡಿಸಿದೆ. ಸಾಮಾಜಿಕ ನ್ಯಾಯ ಒದಗಿಸಿದ ಬಿಜೆಪಿಯೊಂದಿಗೆ ದಲಿತರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಸಂಕಲ್ಪವನ್ನು ಜನರು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಪುಲಕೇಶಿನಗರ ಕ್ಷೇತ್ರದ ಅಭ್ಯರ್ಥಿ ಎ.ಮುರಳಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Related posts

ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?

eNEWS LAND Team

ರಾಷ್ಟ್ರಪತಿಗಳಿಂದ ಸೆ.26 ರಂದು ಧಾರವಾಡ ಐಐಐಟಿಯ ನೂತನ ಕ್ಯಾಂಪಸ್ ಉದ್ಘಾಟನೆ

eNEWS LAND Team

ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳ ಸಮ್ಮೇಳನ

eNEWS LAND Team