ಇಎನ್ಎಲ್ ಧಾರವಾಡ: ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುತ್ತಿದೆ. ದಾಖಲೆಯನ್ನು ಪರಿಶೀಲಿಸಿ ರೋಗಿ, ಸಂಬಂಧಿಕರನ್ನು ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ.
ಧಾರವಾಡದ ಎಸ್ ಡಿ ಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪತ್ತೆಯಾದ ಕಾರಣ ಹಾಗೂ ಎರಡನೇ ಡೋಸ್ ಪಡೆಯುವಲ್ಲಿ ಹಲವರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಿಮ್ಸ್ ಈ ಕ್ರಮ ಕೈಗೊಂಡಿದೆ.
ಕೋವಿಡ್ ಲಸಿಕೆ ಪಡೆದಿದ್ದಾರೆಯೇ ಇಲ್ಲವೇ ಒಂದು ಪರಿಶೀಲಿಸುವ ಸಲುವಾಗಿ ವೈದ್ಯಾಧಿಕಾರಿಗಳು ಐದು ತಂಡ ರಚಿಸಿದ್ದಾರೆ. ಹೊರ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಮಕ್ಕಳ ಆಸ್ಪತ್ರೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಳಿ ಈ ತಂಡವು ರೋಗಿ, ಸಂಬಂಧಿಕರ ಲಸಿಕಾ ದಾಖಲೆಯನ್ನು ಪರೀಕ್ಷೆ ಮಾಡುತ್ತಿದೆ.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವ ಕುರಿತು ದಾಖಲೆ ತರಬೇಕು. ಇದನ್ನು ಪರಿಶೀಲನೆ ಮಾಡಲು ತಂಡ ರಚಿಸಿದ್ದೇವೆ. ಜನರಲ್ಲಿ ಲಸಿಕೆ ಪಡೆಯಲು ಮತ್ತಷ್ಟು ಜಾಗೃತಿ ಮೂಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಎಸ್ ಡಿಎಂ ನಲ್ಲಿ ಕೋವಿಡ್ ಪತ್ತೆಯಾದ ಕಾರಣ ಕಿಮ್ಸ್ ಪ್ರತಿಯೊಂದು ವಿಭಾಗದ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಿದ್ದೇವೆ. ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯಲು ಬರುವವರಿಗೆ ಹೆಚ್ಚುವರಿ ಕೌಂಟರ್ ತೆರೆಯಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ಲಸಿಕೆ ಪಡೆಯಬೇಕು ಎಂದು ತಿಳಿಸಿದರು.