28.6 C
Hubli
ಏಪ್ರಿಲ್ 20, 2024
eNews Land
ಆರ್ಥಿಕತೆ ಸುದ್ದಿ

ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಬಜೆಟ್ ಪೂರಕ: ಜಗದೀಶ್ ಶೆಟ್ಟರ್

ಇಎನ್ಎಲ್ ಹುಬ್ಬಳ್ಳಿ: ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ 2022-23ನೇ ಸಾಲಿನ ಕೇಂದ್ರ ಬಜೆಟ್ ಪೂರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿದ 2022-23ನೇ ಆಯ್ಯವಯ‌ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. “ಒಂದು ದೇಶ ಹಾಗೂ ಒಂದು ತೆರಿಗೆ” ಜೊತೆಗೆ “ಒಂದು ದೇಶ ಒಂದು ಮಾರುಕಟ್ಟೆ” ಎಂಬ ನೀತಿಗೆ ಬಜೆಟ್ ಮುನ್ನುಡಿ ಬರೆದಿದೆ. ಎಲ್ಲಾ ರಾಜ್ಯಗಳ ಆರ್ಥಿಕ ಬಲವರ್ಧನೆಗೆ 1 ಲಕ್ಷ ಕೋಟಿ ರೂಪಾಯಿಗಳ ದೀರ್ಘಕಾಲದ ಸಾಲ ನೀಡಲಾಗಿದೆ.

ಕೋವಿಡ್ ಸಂದರ್ಭದಲ್ಲೂ ದೇಶದ ಆರ್ಥಿಕತೆ ಹಳಿ ತಪ್ಪದ ಹಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಚ್ಚರ ವಹಿಸಿದೆ. ವಿಶ್ವದ ಅತಿದೊಡ್ಡ ಉಚಿತ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ದೇಶದ ಶೇ.70 ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆಯುಷ್ಯಮಾನ ಭಾರತ ಯೋಜನೆ ಅನುಷ್ಠಾನದ ಜೊತೆಗೆ ವೈದ್ಯಕೀಯ ಕ್ಷೇತ್ರ ಮೂಲಭೂತ ಸೌಕರ್ಯ ಹೆಚ್ಚಿಸಲು ಆಯವ್ಯಯದಲ್ಲಿ ಅನುದಾನ ನೀಡಲಾಗಿದೆ.

ಆರ್ ಅ್ಯಂಡ್ ಡಿ( ಸಂಶೋಧನೆ ಮತ್ತು ಅಭಿವೃದ್ಧಿ)ಗೆ ಒತ್ತು ನೀಡಿ ಭಾರತ ಆತ್ಮನಿರ್ಭರವಾಗುವ ಕಡೆ ಹೆಜ್ಜೆ ಇರಿಸಲಾಗಿದೆ. ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆ ತರಲಾಗಿದೆ. ರಕ್ಷಣಾ ಇಲಾಖೆಗೆ ಮೀಸಲಿರಿಸಿದ ಬಜೆಟ್‌ನಲ್ಲಿ ಶೇ.68 ರಷ್ಟು ಬಂಡವಾಳವನ್ನು ದೇಶದ ರಕ್ಷಣಾ ಕ್ಷೇತ್ರಕ್ಕೆ ಸಂಬಂದಿಸಿದ ಉದ್ದಿಮೆಗಳಲ್ಲಿ ತೊಡಗಿಸಲು ನಿರ್ಧರಿಸಲಾಗಿದೆ. ಖಾಸಗಿ ಕಂಪನಿಗಳು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಮ್.ಎಸ್.ಎಂ.ಇ ಹಾಗೂ ಸ್ಟಾರ್ಟ್ ಅಪ್ ಗಳ ಸೌಲಭ್ಯಗಳನ್ನು ಪ್ರಸಕ್ತ ವರ್ಷಕ್ಕೂ ಮುಂದುವರಿಸಲಾಗಿದೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ 1500 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ದೇಶದ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿ ಗಮನಹರಿಸಲಾಗಿದೆ. ಗಡಿ ಭಾಗದ ಹಳ್ಳಗಳಿಗೆ ರಸ್ತೆ ಸಂಪರ್ಕ, ಶಿಕ್ಷಣ ಹಾಗೂ ಸಂವಹನ ಸೌಕರ್ಯ ಕಲ್ಪಿಸುವುದರೊಂದಿಗೆ, ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗಿದೆ.
ದೇಶದ 112 ಹಿಂದುಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮುಂದಿನ ವರ್ಷದಲ್ಲಿ ಈ ಜಿಲ್ಲೆಗಳಲ್ಲಿ ಹಿಂದುಳಿದ ತಾಲೂಕು ಗುರುತಿಸಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲಾಗುವುದು.

ಡಿಜಿಟಲ್ ಇಂಡಿಯಾ ಯೋಜನೆ ಭಾಗವಾಗಿ ದೇಶದ ಎಲ್ಲಾ ಪೋಸ್ಟ್ ಆಫೀಸ್‌ ಗಳನ್ನು ದೇಶದ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ. ಪೋಸ್ಟ್ ಆಫೀಸ್‌ ಗಳು ಎ.ಟಿ.ಎಂ. ಹಾಗೂ ಈ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಲು ಸಶಕ್ತವಾಗಿವೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿದೆ.

ಡಿಜಿಟಲ್ ಕರೆನ್ಸಿ ವಹಿವಾಟಿಗೆ ಒತ್ತು ನೀಡಲಾಗಿದೆ. ಆರ್.ಬಿ.ಐ ಡಿಜಿಟಲ್‌ ಲಾಕ್ ಸಿಸ್ಟಂ ಆಧರಿಸಿ “ಡಿಜಿಟಲ್ ರುಪಿ” ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸದ್ಯದ ಕಾಗದ ಹಾಗೂ ನಾಣ್ಯ ರೂಪದ ವಹಿವಾಟನ್ನು ಕಡಿಮೆಗೊಳಿಸಲಿದೆ. ಡಿಜಿಟಲ್ ಶಿಕ್ಷಣ ಹಾಗೂ ಡಿಜಿಟಲ್ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲು ಕೇಂದ್ರ ನಿರ್ಧರಿಸಿದೆ. ಒನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮದಡಿಯಲ್ಲಿ ಟಿವಿ200 ಶೈಕ್ಷಣಿಕ ಚಾನಲ್ ಪ್ರಸಾರಗೊಳ್ಳಲಿವೆ. ಇ- ಪಾಸ್ ಪೋರ್ಟ್, ತೆರಿಗೆ ಸಲ್ಲಿಕೆಗೆ ಹೊಸ ಆನ್ ಲೈನ್ ವ್ಯವಸ್ಥೆ ತರಲಾಗಿದೆ.

5ಜಿ ತಂತ್ರಜ್ಞಾನ ಅಳವಡಿಕೆ ಮುಂದಾಗಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದಲ್ಲಿ 5ಜಿ ಸ್ಪೆಕ್ಟ್ರಮ್ ಗಳ ಹರಾಜು ನಡೆಸಲಿದೆ. ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ಕಾಂತ್ರಿಕಾರ ಬದಲಾವಣೆ ಉಂಟಾಗಲಿದೆ. ಆಪ್ಟಿಕಲ್ ಕೇಬಲ್ ಅಳವಡಿಕೆ ಕಾರ್ಯ ಮುಂದುವರೆದಿದ್ದು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ.

ಹರ್ ಘರ್ ನಲ್ ಜಲ್ ಯೋಜನೆ ಅನುಷ್ಠಾನಕ್ಕೆ 60 ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. 3.8 ಕೋಟಿ ಮನೆಗಳಿಗೆ 2022-23 ನೇ ಸಾಲಿನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು.

ಗ್ರಾಮೀಣ ಭಾಗದ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ‌ ದೇಶದ ಗ್ರಾಮೀಣ ಹಾಗೂ ನಗರದ ಭಾಗದಲ್ಲಿ ಮನೆ ನಿರ್ಮಿಸುವವರಿಗೆ ಸಹಾಯಧನ ನೀಡಲಾಗುತ್ತಿದೆ. ಮುಂದಿನ ವರ್ಷದಲ್ಲಿ 8 ಲಕ್ಷ ಮನೆಗಳಿಗೆ ಸಹಾಯ ಒದಗಿಸಲು 48 ಸಾವಿರ ಕೋಟಿ ರೂಪಾಯಿಗಳ‌ನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ.

ಕೃಷಿ ಕ್ಷೇತ್ರದ ಮಹತ್ತರ ಬದಲಾವಣೆ ತರಲಾಗಿದೆ. ಕನಿಷ್ಠ ಬೆಂಬಲ ಯೋಜನೆಯಡಿ ದೇಶದ 2.37 ಲಕ್ಷ ಕೋಟಿ ರೂಪಾಯಿಗಳನ್ನು 1.63 ಕೋಟಿ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ರೈತರಿಗೆ ಕಿಸಾನ್ ಡ್ರೋಣ್ ಖರೀದಿಗೆ ಸಹಾಯಧನ ಒದಗಿಸಲಾಗಿದೆ. ಕೃಷಿ ಹಾಗೂ ಖಾಸಗಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದೆ.

ಕೋ-ಆಪರೇಟಿವ್ ಕ್ಷೇತ್ರದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೋ-ಆಪರೇಟಿವ್ ಸುಂಕ ಸಂಗ್ರಹಕ್ಕೆ ಇದ್ದ ಆದಾಯ ಮಿತಿಯನ್ನು 10 ಕೋಟಿ ಹೆಚ್ಚಿಸಲಾಗಿದೆ. ಸರ್ಚಾರ್ಜ್ ಶೇ.12 ರಿಂದ ಶೆ.7‌ಕ್ಕೆ ಇಳಿಕೆ ಮಾಡಲಾಗಿದೆ.

ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದ ನದಿಗಳ ಜೋಡಣೆ ಕೇಂದ್ರ ಬಜೆಟ್ ಅವಕಾಶ ನೀಡಿದೆ. ಮೊದಲ ಹಂತವಾಗಿ ಕಾವೇರಿ,ಗೋದಾವರಿ, ಕೃಷ್ಣಾ,ಪೆನ್ನಾರ್ ಜೋಡಣೆ ಮಾಡಲಾಗುವುದು.

ರೈಲ್ವೇ ಕ್ಷೇತ್ರದಲ್ಲಿ ಕಾಂತ್ರಿಕಾರಿಕೆ ಹೆಜ್ಜೆ ಇರಿಸಲಾಗಿದ್ದು, ಮೂರು ವರ್ಷದಲ್ಲಿ 400 ವಂದೇ ಮಾತರಂ ರೈಲು ಹಾಗೂ 100 ಟರ್ಮಿನಲ್ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಪರಿಸರ ಕಾಳಜಿ ಬಗ್ಗೆ ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂಗಾಲ ಹೊರಸೂಸುವ ತಡೆಗಟ್ಟುವುದರ ಜೊತೆಗೆ ಘನತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಯೋಜನೆ ರೂಪಿಸಲಾಗಿದೆ. ಎಲೆಕ್ಟ್ರಾನಿಕ್ ವೆಹಿಕಲ್ ಹಾಗೂ ಬ್ಯಾಟರಿ ಸಂಶೋಧನೆ ಒತ್ತು ನೀಡಲಾಗಿದೆ.

ಕೇಂದ್ರ ಸರ್ಕಾರ ಜನರ ಜೀವನದಲ್ಲಿ ಕಡಿಮೆ ಹಸ್ತಕ್ಷೇಪ ಮಾಡಿ ಉತ್ತಮ ಆಡಳಿತ ನೀಡಲು ಬಯಸುತ್ತಿದೆ. 186 ಅನುಪಯುಕ್ತ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಒಟ್ಟಾರೆ ಕೇಂದ್ರ ಬಜೆಟ್ ಚುನಾವಣೆ ಅಥವಾ ಯಾವುದೇ ರಾಜಕೀಯ ಲಾಭ ಪಡೆಯವ ಉದ್ದೇಶದಿಂದ ಮಂಡಿಸಿಲ್ಲ. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಮಂಡಿಸಲಾಗಿದೆ. ಕಳೆದ ವರ್ಷದ ಬಜೆಟ್ ಗಾತ್ರ 37,70,000 ಕೋಟಿ ರೂಪಾಯಿಗಳಾಗಿತ್ತು. ಈ ಬಾರಿಯ ಬಜೆಟ್ ಗಾತ್ರ 39,44,909 ಕೋಟಿ ರೂಪಾಯಿಗಳಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

Related posts

ಶಿಕ್ಷಣ ಪ್ರೇಮಿ ಅಮೃತಹೃದಯಿ ರಾವಸಾಹೇಬ ಅಭಿನಂದನಾ ಗ್ರಂಥ ಬಿಡುಗಡೆ

eNEWS LAND Team

ಅಣ್ಣಿಗೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ

eNEWS LAND Team

ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಗಲ್ಲು ಹಾಕಿ ಎಂದು ಆಗ್ರಹ

eNEWS LAND Team