23.4 C
Hubli
ಮಾರ್ಚ್ 24, 2023
eNews Land
ಜಿಲ್ಲೆ

ಕೋವಿಡ್  ನಿಯಂತ್ರಣ ಸರ್ಕಾರದ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ -ಸಚಿವ ಹಾಲಪ್ಪ

Listen to this article

ಇಎನ್ಎಲ್ ಧಾರವಾಡ : ಕಳೆದ 2 ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್ ವೈರಾಣು ತಡೆಯುವಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯ ಯಶಸ್ವಿ ಕ್ರಮಗಳನ್ನು ಕೈಗೊಂಡಿದೆ. 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಜಗತ್ತಿನಲ್ಲಿಯೇ ಬೃಹತ್ ಪ್ರಮಾಣದ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ನಡೆಯುತ್ತಿದೆ. ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಸೋಂಕಿನಿಂದ ಮೃತರಾದ ಜಿಲ್ಲೆಯ 462 ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ರಾಜ್ಯ ಸರ್ಕಾರದಿಂದ ತಲಾ 1 ಲಕ್ಷ ರೂ. ರಂತೆ 4.62 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಕೋವಿಡ್‍ನಿಂದ ಮೃತರಾದ 1143 ವ್ಯಕ್ತಿಗಳ ವಾರಸುದಾರರಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ಧನ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ ಎಂದು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಹೇಳಿದರು.

ಜಿಲ್ಲಾಡಳಿತವು ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇಂದು ಏರ್ಪಡಿಸಿದ್ದ 73ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೊವಿಡ್ ಲಸಿಕಾಕರಣ ಕಾರ್ಯವು ಉತ್ತಮವಾಗಿ ಸಾಗಿದೆ. ಇಲ್ಲಿಯವರೆಗೆ ಸುಮಾರು 15ಲಕ್ಷ 50 ಸಾವಿರ ಜನರಿಗೆ ಕೋವಿಡ್ ಮೊದಲ ಡೋಸ್, 12ಲಕ್ಷ ಜನರಿಗೆ 2ನೇ ಡೋಸ್ ಹಾಗೂ 10ಸಾವಿರ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. 15 ರಿಂದ 18 ವರ್ಷದೊಳಗಿನ ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯವು ಪ್ರಾರಂಭವಾಗಿದೆ. ಇಲ್ಲಿಯವರೆಗೆ ಸುಮಾರು 73 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಕೋವಿಡ್ ತಡೆಯಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಜಿಲ್ಲೆಯ ಪ್ರತಿಯೊಬ್ಬರೂ ಲಸಿಕೆ ಪಡೆದು ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಸೋಂಕು ಬಾರದಂತೆ ಎಚ್ಚರವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

 

ಗಣರಾಜ್ಯೊತ್ಸವ ಮಹತ್ವ ಸ್ಮರಣೆ : ಭಾರತ ಉತ್ತಮ ಆದರ್ಶಗಳು, ಮೌಲ್ಯಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ದೇಶ ಬೃಹತ್ ಸಂವಿಧಾನವನ್ನು ಅಂಗೀಕರಿಸಿ ಸರ್ವತಂತ್ರ, ಸ್ವತಂತ್ರ ಗಣರಾಜ್ಯವಾಗಿ ರೂಪುಗೊಂಡು 73 ವರ್ಷಗಳಾಗಿವೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವುದು ತಮಗೆಲ್ಲಾ ತಿಳಿದ ವಿಷಯವಾಗಿದೆ.

1947ರ ಅಗಸ್ಟ್ 15 ರಂದು ಭಾರತ ದೇಶವು ಸ್ವಾತಂತ್ರ್ಯ ಪಡೆದ ಬಳಿಕ, ಈ ಸಮಿತಿಯು ಸಂಪೂರ್ಣ ಕಾರ್ಯೋನ್ಮುಖವಾಯಿತು. ಒಟ್ಟು 2 ವರ್ಷ 11 ತಿಂಗಳು 17 ದಿನಗಳ ಕಾಲ ನಿರಂತರ ಶ್ರಮವಹಿಸಿ, ಸಂವಿಧಾನದ ಪ್ರಾಥಮಿಕ ಕರಡು ಪ್ರತಿಯನ್ನು ಸಿದ್ಧಪಡಿಸಿತು. ಸುಮಾರು 114 ದಿನಗಳ ಕಾಲ ಸಂವಿಧಾನದ ಕರಡು ಪ್ರತಿಯ ಬಗ್ಗೆ ಸಂವಿಧಾನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿವರ್ಷ ದೇಶಾದ್ಯಂತ ಗಣರಾಜ್ಯ ದಿನವನ್ನಾಗಿ ಹೆಮ್ಮೆಯಿಂದ ಆಚರಿಸಲಾಗುತ್ತಿದೆ ಎಂದು ಗಣರಾಜ್ಯೋತ್ಸವದ ಮಹತ್ವವನ್ನು ಸ್ಮರಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್‍ಪೆಕ್ಟರ್ ಬಿ.ಆರ್. ಚನ್ನಮ್ಮನವರ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ಗೃಹರಕ್ಷಕ ದಳ, ಅಬಕಾರಿ, ಅರಣ್ಯ ಹಾಗೂ ಅಗ್ನಿಶಾಮಕ ಇಲಾಖೆಗಳ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸದ್ದವು. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪರೇಡ್ ಆಜ್ಞೆಗಳನ್ನು ಬಳಕೆಗೆ ತಂದಿದ್ದು ವಿಶೇಷವಾಗಿತ್ತು. ಸ್ಟಿಕ್ ಮೇಜರ್ ಐ.ಪಿ. ಡಿಸೋಜಾ ನೇತೃತ್ವದ ಪೊಲೀಸ್ ವಾದ್ಯವೃಂದ ಸುಶ್ರಾವ್ಯ ಹಾಡಿನ ಮೂಲಕ ಗಮನ ಸೆಳೆಯಿತು.

ಶಾಸಕ ಅಮೃತ ದೇಸಾಯಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮತ್ತಿತರರು ಇದ್ದರು.

ಸಮಾರಂಭಕ್ಕೂ ಮುನ್ನ ಕಾರ್ಗಿಲ್ ಸ್ತೂಪ, ಡೆಪ್ಯುಟಿ ಚೆನ್ನಬಸಪ್ಪ ಹಾಗೂ ಕೆ.ಜಿ.ಕುಂದಣಗಾರ ಅವರ ಪ್ರತಿಮೆಗಳಿಗೆ ಸಚಿವರು ಗೌರವ ಅರ್ಪಿಸಿದರು.

Related posts

ಅಣ್ಣಿಗೇರಿ: ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

eNewsLand Team

ಹಿಜಾಬ್ ನಿರ್ಬಂಧ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆ ಬೃಹತ್ ಪ್ರತಿಭಟನೆ

eNewsLand Team

ಮಳೆ: ಧಾರವಾಡದಲ್ಲಿ 8600 ಹೆಕ್ಟೇರ್ ಬೆಳೆ ಹಾನಿ: ಡಿಸಿ

eNewsLand Team