ಇಎನ್ಎಲ್ ಹುಬ್ಬಳ್ಳಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಫೆ.27ರಿಂದ ಮಾ.1ರವರೆಗೆ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಶೇ.100ರಷ್ಟು ಸಾಧನೆ ಮಾಡಿಕೊಂಡು ಬರಲಾಗಿದೆ. ಈ ಸಾಲಿನಲ್ಲಿಯೂ ಸಹ ಶೇ.100ರಷ್ಟು ಗುರಿ ಸಾಧಿಸಲು ಎಲ್ಲರ ಸಹಕಾರ ಅವಶ್ಯಕವಾಗಿದೆ. ಎಲ್ಲರೂ ಸೇರಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಪ್ರಕಾಶ ನಾಶಿ ಕರೆ ನೀಡಿದರು.
ಹುಬ್ಬಳ್ಳಿಯ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಪಲ್ಸ್ ಪೋಲಿಯೋ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ 7 ಆರೋಗ್ಯ ಕೇಂದ್ರಗಳು, 34 ಉಪಕೇಂದ್ರಗಳು ಇವೆ. 154264 ಜನಸಂಖ್ಯೆಯನ್ನು ತಾಲೂಕು ಹೊಂದಿದೆ. 131148 ಮಕ್ಕಳು 5 ವರ್ಷದೊಳಗಿನವರಿದ್ದು, ಈ ಮಕ್ಕಳಿಗೆ ಪೋಲಿಯೋ ಹಾಕಲಾಗುತ್ತದೆ. 73 ಹೈ ರಿಸ್ಕ್ ಪ್ರದೇಶಗಳಿದ್ದು, 167 ಮಕ್ಕಳಿಗೆ ಪೋಲಿಯೋ ನೀಡಬೇಕಾಗಿದೆ. ತಾಲೂಕಿನ 47 ಹಳ್ಳಿಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದೆ. 79 ಪೋಲಿಯೋ ಬೂತ್‌ಗಳನ್ನು ತೆರೆಯಲಾಗುತ್ತಿದೆ. 3 ಲಸಿಕೆ ನೀಡುವ ಟ್ರಾನ್ಜಂಟ್ ಹಾಗೂ 1 ಮೊಬೈಲ್ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ತಾ.ಪಂ.ಇ ಓ ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ನೋಡಲ್ ಅಧಿಕಾರಿ ಗಂಗಾಧರ ಕಂದಕೂರ ಮಾತನಾಡಿ, ಫೆ.27ರಿಂದ ಮಾ.1ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಫೆ.27ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಹಾಕಲಾಗುತ್ತದೆ. ಅಲ್ಲದೇ ಎರಡು ದಿನಗಳ ಕಾಲ ಮನೆಗಳಿಗೆ ತೆರಳಿ ಪೋಲಿಯೋ ಹನಿ ಹಾಕಲಾಗುವುದು. ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಮಕ್ಕಳಿಗೆ ಸಹ ಪಲ್ಸ್ ಪೋಲಿಯೋ ಹಾಕಲು ಮುಂದಾಗಬೇಕು. ಶೇ.100ರಷ್ಟು ಸಾಧನೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ. ಅಂಗನವಾಡಿ ಕೇಂದ್ರಗಳನ್ನು ಲಸಿಕಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಅಂಗನವಾಡಿ ಕೇಂದ್ರಗಳನ್ನು ಶುಚಿಗೊಳಿಸಿ, ಪೋಲಿಯೋ ಅಭಿಯಾನಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಂದ ಚಾಲನೆ ನೀಡಬೇಕು. ಅಲ್ಲದೇ ಗ್ರಾಮೀಣ ಭಾಗದ ಜನರಲ್ಲಿ ಪಲ್ಸ್ ಪೋಲಿಯೋ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್. ಹಿತ್ತಲಮನಿ ಮಾತನಾಡಿ, ಶೀತಲ ಸರಪಣಿ ವ್ಯವಸ್ಥೆ ಕಾಯ್ದುಕೊಳ್ಳಲು ಫೆ.25 ರಿಂದ ಮಾ.2ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಎಲ್ಲ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಕುರಿತು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿವಿಧ ಇಲಾಖೆಗಳ ವಾಹನಗಳನ್ನು ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಒದಗಿಸಬೇಕು. ಸಂಚಾರಿ ಬೂತ್‌ಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತೊಂದರೆಯಾಗದಂತೆ ಪೋಲಿಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ನಡೆಯಿತು. ತಂಬಾಕು ಮತ್ತು ಇತರೇ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಅಡಿಯಲ್ಲಿ ತಂಬಾಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು. ಅಲ್ಲದೇ 200 ರೂ. ದಂಡ ವಿಧಿಸಲಾಗುವುದು ಎಂದು ತಹಶೀಲ್ದಾರ್ ಪ್ರಕಾಶ್ ನಾಶಿ ಹೇಳಿದರು.
ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಹಾಗೂ ಶಾಲಾ ಪ್ರದೇಶಗಳ ವ್ಯಾಪ್ತಿಯಲ್ಲಿ 100 ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ಬಿಇಒ ಅಶೋಕ ಸಿಂದಗಿ, ಸಿಡಿಪಿಒ ಕಮಲಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಸ್. ಬಡಿಗೇರ, ಜಿ.ವಿ. ಓಂಕಾರಗೌಡರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.