ಇಎನ್ಎಲ್ ಧಾರವಾಡ : ಜಿಲ್ಲೆಯಲ್ಲಿ ನರೇಗಾ ಯೋಜನೆ ಮೂಲಕ ಉತ್ತಮ ಸಾಧನೆ ಮಾಡಲಾಗಿದ್ದು, ಜಲಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ, ಮೂಲಸೌಕರ್ಯ ಸ್ವತ್ತುಗಳ ನಿರ್ಮಾಣ ಸೇರಿದಂತೆ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಡಾ.ಸುಶೀಲಾ ಬಿ. ಹೇಳಿದರು.
ಅವರು ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಿದ್ದ ನರೇಗಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಕಾಯಕ ಮಿತ್ರರನ್ನು ನೇಮಿಸುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಲಾಗಿದೆ. ತಾಂಡಾ ರೋಜಗಾರ್ ಮಿತ್ರ ನೇಮಕಾತಿ ಮಾಡಿ, ತಾಂಡಾಗಳಲ್ಲಿ ನರೇಗಾದಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ತಾಂಡಾ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳು ನರೇಗಾದಡಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ಆರ್ಥಿಕ ಸ್ವಾವಲಂಬಿಗಳಾಗಲು ಅವಕಾಶ, ತಿಳುವಳಿಕೆ ಮತ್ತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನರೇಗಾ ಹಾಗೂ ಜಲಶಕ್ತಿ ಅಭಿಯಾನದಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗಿದೆ. ಮುಂದಿನ ನರೇಗಾ ಕ್ರಿಯಾಯೋಜನೆಯಲ್ಲಿ ಶಾಲೆ ಕಾಲೇಜು ಆವರಣದಲ್ಲಿ ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು, ಕೈತೋಟ ಮುಂತಾದ ಮೂಲಭೂತ ಸೌಕರ್ಯಗಳನ್ನು ಮತ್ತು ಹೊಲಗಳಿಗೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುವುದೆಂದು ಸಿಇಓ ತಿಳಿಸಿದರು.
2021-22 ನೇ ಸಾಲಿನಲ್ಲಿ ಜಿಲ್ಲೆಗೆ ರೂ.14530.00 ಲಕ್ಷ ಅನುದಾನದ ಕೂಲಿಕಾರರ ಆಯವ್ಯಯವನ್ನು ಸರಕಾರವು ಮಂಜೂರು ಮಾಡಿತ್ತು. ಇದರಲ್ಲಿ ಇಲ್ಲಿವರೆಗೆ ರೂ.7188.84 ಲಕ್ಷದ ಕೂಲಿ ಮೊತ್ತ ಮತ್ತು ರೂ.2513.18 ಲಕ್ಷದ ಸಾಮಗ್ರಿ ಮೊತ್ತ ಸೇರಿ ಒಟ್ಟು ರೂ.9702.01 ಲಕ್ಷ ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದರು.
2021-22 ರಲ್ಲಿ ಒಟ್ಟು 27.00 ಲಕ್ಷ ವಾರ್ಷಿಕ ಮಾನವ ದಿನಗಳ ಗುರಿ ನಿಗದಿಪಡಿಸಿದ್ದು, ಇಲ್ಲಿವರೆಗೆ ಒಟ್ಟು 24.99 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಶೇ.90.82 ರಷ್ಟು, ವಾರ್ಷಿಕ ಪ್ರಗತಿ ಸಾಧಿಸಲಾಗಿದೆ.
ನರೇಗಾ ಉದ್ಯೋಗ ವಿವರ: 2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದ್ದ 62,462 ಕುಟುಂಬಗಳ ಪೈಕಿ 57,890 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಮತ್ತು ಇದರಲ್ಲಿ 988 ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯಡಿ ನೂರು ದಿನಗಳನ್ನು ಪೂರೈಸಿವೆ. ಸೃಜಿಸಿದ ಪ್ರತಿ ದಿನದ ಮಾನವ ದಿನಕ್ಕೆ ರೂ.289/- ಕೂಲಿ ಮತ್ತು ರೂ.10/- ಸಲಕರಣೆ ವೆಚ್ಚ ನೀಡಲಾಗುತ್ತಿದೆ.
ಕಾಮಗಾರಿಗಳ ವಿವರ: ಇಲ್ಲಿವರೆಗೆ ನರೇಗಾ ಯೋಜನೆಯಡಿ ಒಟ್ಟು 26,129 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 22,443 ವೈಯಕ್ತಿಕ ಕಾಮಗಾರಿಗಳು ಮತ್ತು 3,686 ಸಮುದಾಯ ಕಾಮಗಾರಿಗಳಾಗಿವೆ. ಈಗ ನರೇಗಾ ಮತ್ತು ಜಲಶಕ್ತಿ ಕಾರ್ಯಕ್ರಮದ 9,163 ಕಾಮಗಾರಿಗಳು ಮುಕ್ತಾಯವಾಗಿವೆ. ಮತ್ತು 12,950 ಕಾಮಗಾರಿಗಳು ಪ್ರಗತಿಯಲ್ಲಿವೆ. 4,016 ಕಾಮಗಾರಿಗಳು ಪ್ರಾರಂಭವಾಗಬೇಕಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ ಹಾಗೂ ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ ನರೇಗಾ ಸಾಧನೆ ಕುರಿತು ಮಾತನಾಡಿದರು. ಮುಖ್ಯ ಲೆಕ್ಕಾಧಿಕಾರಿ ಲಲಿತಾ ಸಿ. ಲಮಾಣಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ಕಾರ್ಯನಿವಾಹಕ ಅಧಿಕಾರಿಗಳಾದ ಸಂತೋಷ ತಳಕಲ್ (ಅಳ್ನಾವರ), ಎಸ್.ಎಂ. ಕಾಂಬಳೆ (ನವಲಗುಂದ, ಅಣ್ಣಿಗೇರಿ), ರಾಘವೇಂದ್ರ ಜಗಲಾಸಾರ್ (ಧಾರವಾಡ), ಗಂಗಾಧರ ಕಂದಕೂರ (ಹುಬ್ಬಳ್ಳಿ), ಶಿವಪುತ್ರಪ್ಪ ಮಠಪತಿ (ಕಲಘಟಗಿ), ಮಹೇಶ ಕೋರಿ (ಕುಂದಗೋಳ) ಮತ್ತು ವಿವಿಧ ಗ್ರಾಮ ಪಂಚಾಯತಿಗಳ ಕಾಯಕ ಬಂಧು, ಕಾಯಕ ಮಿತ್ರರು, ನರೇಗಾ ಯೋಜನೆಯ ಸಿಬ್ಬಂದಿ, ಕೃಷಿ, ತೋಟಗಾರಿಗೆ, ಅರಣ್ಯ, ರೇಷ್ಮೆ, ಪಶುಸಂಗೋಪನೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಧಾರವಾಡ ತಾಲೂಕು ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಗಿರೀಶ ಕೋರಿ ಸ್ವಾಗತಿಸಿದರು. ಕಲಘಟಗಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಗೋಳ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಅಜಯ್ .ಎನ್. ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿದರು. ಹುಬ್ಬಳ್ಳಿ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ವಂದಿಸಿದರು. ನವಲಗುಂದ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ಜಗದೀಶ ಹಡಪದ ನಿರೂಪಿಸಿದರು.