ಇಎನ್ಎಲ್ ಹುಬ್ಬಳ್ಳಿ: ಬಡ್ಡಿಗೆ ಪಡೆದ ಸಾಲ ಮರುಪಾವತಿ ಮಾಡಿಲ್ಲ ಎಂದು ವ್ಯಕ್ತಿಯನ್ನು ಐವರು ಅಪಹರಣ ಮಾಡಿ, ಹಲ್ಲೆ ನಡೆಸಿದ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರಾಜೀವ ನಗರದ ಅನಿಲ ಕಾಟಿಗಾರ ಅವರು ಹಲ್ಲೆಗೆ ಒಳಗಾದವರು.
ಚನ್ನಪೇಟೆ ನಿವಾಸಿಗಳಾದ ವಿಜಯ ಬದ್ದಿ, ಬಂಟು ನಾಕೋಡ, ಪವನ ಜರತಾರಘರ, ಸಚಿನ ಉತಾರೆ ಮತ್ತು ನಾಗರಾಜ ಜಂತ್ಲಿ ಆರೋಪಿತರು. ಅನಿಲ ಅವರು ವಿಜಯ ಅವರಿಂದ ಬಡ್ಡಿಗೆ ₹7ಲಕ್ಷ ಹಣ ಸಾಲ ಪಡೆದಿದ್ದರು. ಅದರಲ್ಲಿ ₹2 ಲಕ್ಷ ಮರಳಿಸಿದ್ದು, ಬಾಕಿ ಹಣ ಮರಳಿಸುವಂತೆ ಕಿರುಕುಳ ನೀಡಿ ಎರಡು ಖಾಲಿ ಚೆಕ್ ಮತ್ತು ಮನೆಗೆ ಸಂಬಂಧಿಸಿದ ಆಸ್ತಿ ದಾಖಲೆ ತೆಗೆದುಕೊಂಡು ಹೋಗಿದ್ದ.
ನಂತರ ನಾಲ್ವರು ಆರೋಪಿಗಳು ಸೇರಿ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕಾರಿನಲ್ಲಿ ಅಪಹರಿಸಿ ಕಲಘಟಗಿಯಲ್ಲಿರುವ ಇರಕಲ್ ಗೆಸ್ಟ್ ಹೌಸ್‌ನಲ್ಲಿ ಕೂಡಿಹಾಕಿ ಜೀವ ಬೆದರಿಕೆ ಹಾಕಿದ್ದರು. ವಿಪರೀತ ಹಲ್ಲೆ ನಡೆಸಿದ ಪರಿಣಾಮ ಅನಿಲ ಪ್ರಜ್ಞೆ ತಪ್ಪಿದ್ದು, ಪುನಃ ಅವರ ಮನೆಗೆ ತಂದು ಬಿಟ್ಟಿದ್ದರು. ಅದಾದ ನಂತರ ಪಡೆದ ಬಡ್ಡಿ ಸಾಲದಲ್ಲಿ ₹83 ಸಾವಿರ ಬಾಕಿ ಇಟ್ಟು ಎಲ್ಲವೂ ನೀಡಿದ್ದರು. ಆದರೆ, ಈ ಹಿಂದೆ ಪಡೆದ ಚೆಕ್ ಇಟ್ಟುಕೊಂಡು ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.