ಇಎನ್ಎಲ್ ಧಾರವಾಡ
ಮಿಲ್ಟ್ರಿ ಕ್ಯಾಂಟೀನ್‌ಗೆ ಸೈಕಲ್ ಬೇಕಾಗಿದೆ ಎಂದು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ದೀಪಕ್ ಸೈಕಲ್ ಅಂಗಡಿಯ ವ್ಯವಸ್ಥಾಪಕ ಸುನೀಲ್ ವಕ್ಕುಂದ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ₹70ಸಾವಿರ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಕೇಶ್ವಾಪುರದ ಅರಿಹಂತನಗರದಲ್ಲಿರುವ ಮಿಲ್ಟ್ರಿ ಕ್ಯಾಂಟೀನ್‌ನಿಂದ ಮಾತನಾಡುತ್ತಿರುವುದಾಗಿ ಕರೆ ಮಾಡಿದ ವಂಚಕ, 20 ಸೈಕಲ್‌ಗಳ ಬೇಡಿಕೆ ಇಟ್ಟಿದ್ದ. ಅದಕ್ಕೆ ಸುನೀಲ್ ₹1.36 ಲಕ್ಷದ ಬಿಲ್ ಅನ್ನು ವಂಚಕನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ನಂತರ ಸೈಕಲ್‌ಗಳನ್ನು ಕ್ಯಾಂಟೀನ್ ಬಳಿ ಸಾಗಿಸಿದಾಗ, ಕ್ಯಾಂಟೀನ್ ನಿಯಮದ ಪ್ರಕಾರ ನಾವು ಕಳುಹಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅದಕ್ಕೆ ₹1 ಸಂದಾಯ ಮಾಡಿದರೆ, ದುಪ್ಪಟ್ಟು ಬರುತ್ತದೆ. ಆ ಮೂಲಕವೇ ಸೈಕಲ್ ಹಣ ಪಾವತಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ವ್ಯವಸ್ಥಾಪಕರು ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.