ಇಎನ್ಎಲ್ ಬೆಂಗಳೂರು:
ಕನ್ನಡ ಹೃದಯ ಮಿಡಿಯುವವರೆಗೂ ಅಪ್ಪು ನಿತ್ಯ ನಿರಂತರ ಜೀವಂತವಾಗಿ ಇರುವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ನಗರದಲ್ಲಿ ಇಂದು ‘ ಮದಗಜ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಅವರು ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ; ಸಾಧನೆ ಮುಖ್ಯ. ಹಲವಾರು ಸಾಧಕರು ಕಿರಿ ವಯಸ್ಸಿನಲ್ಲಿಯೇ ಅಗಲಿದ್ದಾರೆ. ಆದರೆ ತಮ್ಮ ಹೆಜ್ಜೆ ಗುರುತುಗಳನ್ನು ನೆನಪಿನಂಗಳದಲ್ಲಿ ಬಿಟ್ಟು ಹೋಗುತ್ತಾರೆ. ಅಪ್ಪು ಕೂಡ ನಮ್ಮೆಲ್ಲರಲ್ಲೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನಟ ಪುನೀತ್ ರಾಜ್ ಕುಮಾರ್ ಕುರಿತು ನುಡಿದರು.
ಸ್ವಾಮಿ ವಿವೇಕಾನಂದರ ನುಡಿಯಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ನಿಜವಾದ ಸಾಧಕ ಸಾವಿನ ನಂತರವೂ ಬದುಕುತ್ತಾನೆ. ಅಪ್ಪು ಅಂತಹ ಸಾಧಕರ ಸಾಲಿಗೆ ಸೇರಿದವರು ಎಂದು ನುಡಿದರು.
ಪುನೀತ್ ಮೃತರಾದ ದಿನ ತಮ್ಮನ್ನು ಭೇಟಿಯಾಗಲು ಸಮಯ ನೀಡಿದ್ದೆ. ಆದರೆ ಮೇಲಿರುವವನು ಅದಕ್ಕೆ ಮೊದಲೇ ಸಮಯ ಕೊಟ್ಟ. ನಾನು ಕೊಟ್ಟ ಸಮಯದ ಭೇಟಿಗಾಗಿ ಅಪ್ಪು ಬರುವವರೆಗೆ ಕಾಯುವೆ. ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ಭಾವುಕರಾಗಿ ನುಡಿದರು.
ಮದಗಜ ಚಿತ್ರದ ಟ್ರೈಲರ್ ವೀಕ್ಷಿಸಿ ತಾಂತ್ರಿಕವಾಗಿ ಅತ್ಯುತ್ತಮ ಚಿತ್ರ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ ಚಿತ್ರ ತಂಡಕ್ಕೆ ಶುಭಕೋರಿದರು.
ನಟ ಶ್ರೀಮುರಳಿ, ಸಚಿವರಾದ ಡಾ.ಅಶ್ವಥ್ ನಾರಾಯಣ, ಮುನಿರತ್ನ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.