34 C
Hubli
ಮಾರ್ಚ್ 23, 2023
eNews Land
ಕೃಷಿ

ಮಾವುಬೆಳೆ; ಹೂ, ಕಾಯಿ ಉದುರುವಿಕೆ ತಡೆ ಹಾಗೂ ರೋಗ ನಿಯಂತ್ರಣ ಕ್ರಮ

Listen to this article

ಇಎನ್ಎಲ್ ಧಾರವಾಡ : ಮಾವಿನ ತೋಟದಲ್ಲಿ ಉತ್ತಮ ಹೂ ಬಿಟ್ಟ ಮಾವಿನ ಗಿಡಗಳಿಗೆ ಜಿಗಿ ಹುಳು, ಹೂ ತೆನೆ ಕೊರಕ, ಥ್ರಿಪ್ಸ್ ನುಸಿ, ಹಿಟ್ಟು ತಿಗಣಿಯಂತಹ ಕೀಟಗಳು ಕಾಣಿಸಿಕೊಂಡು ಕಾಯಿ ಉದುರುವಿಕೆಗೆ ಕಾರಣವಾಗುತ್ತದೆ. ಅಂಗಮಾರಿ ರೋಗದ ಬಾಧೆ ಹೆಚ್ಚಾಗಿದೆ. ಕೆಲವು ತೋಟಗಳಲ್ಲಿ ಕಾಂಡಕೊರೆಯುವ ಹುಳು ಮತ್ತು ಸೊರಗು ರೋಗ ಕಾಣಿಸಿಕೊಂಡಿದೆ. ಕೆಲವು ಕಡೆ ಲಿಂಬೆ ಗಾತ್ರದ ಕಾಯಿಗಳು ಉದುರುತ್ತಿವೆ. ಮಾವಿನ ಫಸಲಿನ ಈ ಎಲ್ಲಾ ಸಮಸ್ಯೆಗಳಿಗೆ ತೋಟಗಾರಿಕೆ ಇಲಾಖೆಯು ಪರಿಹಾರ ಹಾಗೂ ನಿಯಂತ್ರಣ ಕ್ರಮಗಳ ಸಲಹೆ ನೀಡಿದೆ.

ಈಗ ತಾಪಮಾನ ಹೆಚ್ಚುತ್ತಿರುವದರಿಂದ ಮಾವು ಬೆಳೆಗೆ ನಿಯಮಿತವಾಗಿ ನೀರು ಕೊಡಬೇಕು. ಕಡಲೆ ಗಾತ್ರದ ಕಾಯಿಗಳಾಗಿದ್ದಲ್ಲಿ ನೀರನ್ನು ವಾರದಲ್ಲಿ ಎರಡು ಸಾರಿ ಹನಿ ನೀರಾವರಿ ಮೂಲಕ ಕೊಡಬೇಕು. ನೀರು ಕೊಡುವಾಗ ಗಿಡದ ಬಡ್ಡಿಯ ಸುತ್ತಲೂ 4 ರಿಂದ 5 ಅಡಿ ಪಾತಿ ಮಾಡಿ ಸುತ್ತಲಿನ ಮಣ್ಣನ್ನು ಸಡಿಲಿಸಿ ನೀರು ಕೊಡಬೇಕು. ಇದೇ ಸಮಯದಲ್ಲಿ ಪೋಷಕಾಂಶಗಳ ನಿರ್ವಹಣೆಯೂ ಮುಖ್ಯ. ನೀರಿನಲ್ಲಿ ಕರಗುವ ಮಾವು ಸ್ಪೇಷಲ್, ಬೋರಾನ್ ಮತ್ತು ಪೊಟ್ಯಾಷಿಯಂ ನೈಟ್ರೇಟ್ ಗೊಬ್ಬರಗಳನ್ನು ತಜ್ಞರ ಸಲಹೆಯಂತೆ ಸಿಂಪಡಿಸಬೇಕು.

ಈ ಸಮಯದಲ್ಲಿ ಜಿಗಿಹುಳು, ಬೂದಿರೋಗ ಅಲ್ಲದೇ ಚಿಬ್ಬುರೋಗ ಕಾಣಿಸಿಕೊಂಡು ಹೂಗಳು ಒಣಗಿ ಕಪ್ಪಾಗಿ ಉದುರುತ್ತವೆ. ತಜ್ಞರ ಸಲಹೆಯಂತೆ ಸೂಕ್ತ ಶಿಲೀಂಧ್ರನಾಶಕ ಮತ್ತು ಕೀಟನಾಶಕಗಳನ್ನು ಸಿಂಪಡಿಸಬೇಕು. ಒಂದೆರಡು ಬಾರಿ ಅಜಾಡಿರಾಕ್ಸಿನ್ ಬೇವಿನ ಎಣ್ಣೆ ಸಿಂಪಡಿಸಬೇಕು. ಕಾಂಡಕ್ಕೆ ಗೆದ್ದಲು ಹುಳು ಬಾರದಂತೆ ಸಿ.ಓ.ಸಿ ಜೊತೆಗೆ ಕ್ಲೋರೋಫೈರಿಫಾಸ್ ಕೀಟನಾಶಕ ಮಿಶ್ರಣ ಮಾಡಿ ಗಿಡದ ಬಡ್ಡಿಗೆ ಲೇಪಿಸಬೇಕು. ಕಾಂಡಕೊರಕ ಹುಳು ಮತ್ತು ಶಿಲೀಂಧ್ರದಿಂದಾಗಿ ಸೊರಗು ರೋಗ ಕಾಣಿಸಿಕೊಳ್ಳುತ್ತದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಬೋರಾರ ಹತೋಟಿ ತಂತ್ರಜ್ಞಾನದ ಮಿಶ್ರಣ ಬಳಸಬೇಕು, ಶಿಲೀಂಧ್ರನಾಶಕಗಳನ್ನು ಡ್ರೆಂಚಿಂಗ್ ಮಾಡಬೇಕು.

ಈ ಬಾರಿ ಉತ್ತಮ ಮಾವು ಫಸಲಿನ ನಿರೀಕ್ಷೆ ಇರುವುದರಿಂದ ಬೆಳೆಗಾರರು ತಮ್ಮ ಫಸಲನ್ನು ಕಾಪಾಡಿಕೊಂಡು ಉತ್ತಮ ಲಾಭಗಳಿಸಬಹುದು. ಕೀಟಗಳ ನಿಯಂತ್ರಣಕ್ಕೆ ಇಮಿಡಾಕ್ಲೋಪ್ರಿಡ್ ಶೇ.17.8 ಎಸ್.ಎಲ್. 0.50 ಮಿ.ಲೀ ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ 5.0 ಇ.ಸಿ. ಅಥವಾ ಬೂಪ್ರೊಪಿನ್ 25 ಇ.ಸಿ ಜೊತೆಗೆ ಅಜಾಡಿರ್ಯಾಕ್ಸಿನ್ 10000 ಪಿ.ಪಿಎಂ, 2 ಮಿ.ಲೀ ಕೀಟನಾಶಕಗಳನ್ನು ಬದಲಾಯಿಸಿ ಸಿಂಪಡಿಸುತ್ತಿರಬೇಕು. ರೋಗಗಳು ಕಾಣಿಸಿಕೊಂಡಾಗ ಶೀಲಿಂಧ್ರನಾಶಕಗಳಾದ ಹೆಕ್ಸಕೊ ನಾಜೋಲ್ ಶೇ.5, ಎಸ್.ಸಿ 1 ಮಿ.ಲೀ ಅಥವಾ ಟೆಬುಕೊನಜಾಲ್ 25 ಇ.ಸಿ 0.50 ಮಿ.ಲೀ ಅಥವಾ ಡೈಫೆಂಟ್ ಕೊನಜಾಲ್ 25 ಇ.ಸಿ. 0.50 ಮಿ.ಲೀ ಅಥವಾ ಕಾರ್ಬನ್‍ಡೈಜಿಂ. ಶೇ. 12 ಕ್ಕಿಂತ ಹೆಚ್ಚು ಮ್ಯಾಂಕೋಜೆಬ್, ಶೇ.43 ಡಬ್ಲ್ಯೂಪಿಯಂತಹ ಶಿಲೀಂಧ್ರ ನಾಶಕಗಳನ್ನು ಬದಲಾಯಿಸಿ ಸಿಂಪಡಿಸುತ್ತಿರಬೇಕು. ಎರೆಜಲ, ಜೀವಾಮೃತ ಮತ್ತು ಗೋಕೃಪಾಮೃತದಂತಹ ಸಾವಯವ ಪದಾರ್ಥಗಳನ್ನು ನಿಯಮಿತವಾಗಿ ಸಿಂಪಡಿಸುವುದರಿಂದ ಹೂ ಉದುರುವಿಕೆ ಕಡಿಮೆ ಆಗಿ ಉತ್ತಮ ಗುಣಮಟ್ಟದ ಫಸಲನ್ನು ನಿರೀಕ್ಷಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಮ್ಮಿನಭಾವಿಯ ಸಹಾಯಕ ತೋಟಗಾರಿಕ ಅಧಿಕಾರಿ ಮಹೇಶ್ ಪಟ್ಟಣಶೆಟ್ಟಿ-9916114535, ಧಾರವಾಡ ಯಲ್ಲಮ್ಮ ಐರಣಿ-9591164754, ಅಳ್ನಾವರ ಮತ್ತು ಗರಗ ವಾಯ್. ಎ. ಕುರುಬೆಟ್ಟ- 7353674533 ಅವರನ್ನು ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ಪ್ರಕಟಣೆಗೆ ತಿಳಿಸಿರುತ್ತಾರೆ.

Related posts

ಕಲಬುರಗಿ, ಹಾವೇರಿಯಲ್ಲಿ ಅತ್ಯಾಧುನಿಕ ರೇಷ್ಮೆಗೂಡು ಮಾರುಕಟ್ಟೆ:  ಸಿಎಂ ಬೊಮ್ಮಾಯಿ

eNewsLand Team

ಕೃಷಿ ಕಾಯಿದೆ ಹಿಂಪಡೆತದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

eNEWS LAND Team

ಪಿ.ಎಮ್.ಕಿಸಾನ್ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯ

eNewsLand Team