23.4 C
Hubli
ಮಾರ್ಚ್ 24, 2023
eNews Land
ಕೃಷಿ

ಕೊರೋನಾ ಕಲಿಸಿದ ಪಾಠ; ಕಲಘಟಗಿ ರೈತನೇ ವ್ಯಾಪಾರಿಯಾದ ಮಾದರಿ ಕಥೆಯಿದು!!

Listen to this article

ವಿನಾಯಕ ಭಟ್ ಹುಲ್ಲಂಬಿ

ಇಎನ್ಎಲ್ ಕಲಘಟಗಿ:

ಆತ ಸಹಜ, ಸಾಮಾನ್ಯ ಕೃಷಿಕ. ಬೆಳೆ ಬೆಳೆಯುವುದಾಯಿತು. ದಲ್ಲಾಳಿಗಳ ಬಳಿ ಮಾರಾಟ ಮಾಡಿ ಅವರು ಕೈಗಿಟ್ಟ ಹಣ ತಂದು ಸಂಸಾರ ನಡೆಸುವುದಾಯಿತು ಎಂದುಕೊಂಡಿದ್ದವ. ಆದರೆ, ದಿಢೀರ್ ಎದುರಾದ ಕೊರೋನಾ ಕಾಲ ಬದುಕಿನ ಮೊಗ್ಗಲು ಬದಲಿಸಿದೆ‌. ಸಂಕಷ್ಟ ಬದುಕಿಗೆ ಹೊಸ ಪಾಠ ಕಲಿಸಿದೆ. ಇವತ್ತು ಆತ ಬೆಳೆ ಬೆಳೆಯುವುದು ಮಾತ್ರವಲ್ಲ ತಾನೇ ಊರೂರಿಗೆ, ಹಳ್ಳಿ ಹಳ್ಳಿಗೆ ಕೊಂಡೊಯ್ದು ಮಾರುತ್ತಾನೆ. ವಹಿವಾಟಲ್ಲಿ ಸ್ವಾವಲಂಬನೆ ಸಾಧನೆಯಾಗಿದೆ.

ಹೌದು. ಇವರ ಹೆಸರು ಸೋಮಶೇಖರ ಸಂಗಪ್ಪ ಮ್ಯಾವಳ್ಳಿ. ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದ ನಿವಾಸಿ. ಕೊರೋನಾ ಕಾಲದ ಇವರ ಬದುಕಿನ ಪರಿವರ್ತನೆ ನೋಡುಗರು, ಸಮಾಜದ ಕಣ್ಣಿಗೆ ಚಿಕ್ಕದು ಎನ್ನಿಸಬಹುದು, ಇದೇನು ಮಹಾ?! ಎನ್ನುವವರೂ ಇರಬಹುದು. ಆದರೆ, ಜೀವನದಲ್ಲಿ ಎದುರಾಗುವ ಸ್ಥಿತ್ಯಂತರವನ್ನು ಹೇಗೆ ಎದುರಿಸಬೇಕು? ಬದುಕಿನ ರಥವನ್ನು ಹೇಗೆ ಎಳೆದೊಯ್ಯಬೇಕು? ಕುಗ್ಗದೆ ಮುನ್ನುಗ್ಗಬೇಕು ಎಂಬ ದೊಡ್ಡ ಜೀವನಪಾಠ ಇಲ್ಲಿದೆ. ಬದುಕಿನ ಅನಿವಾರ್ಯತೆಗೆ ಒಗ್ಗಿಕೊಳ್ಳುವುದು ಹೇಗೆಂಬ ಪ್ರಶ್ನೆಗೆ ಉತ್ತರವಿದೆ.

ಪತ್ನಿ , ನಾಲ್ಕು ಹೆಣ್ಣುಮಕ್ಕಳು, ಒಂದು ಗಂಡು ಮಗುವಿನ ಸಂಸಾರ ಇವರದ್ದು. ಸಂಸಾರ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗ ದಿಢೀರ್ ಎದುರಾಗಿದ್ದು ಕೊರೋನಾ ಲಾಕ್ ಡೌನ್.

ಹಗಲು-ರಾತ್ರಿ ಕಷ್ಟ ಪಟ್ಟು ಎರಡು ಎಕರೆ ಬಾಳೆಹಣ್ಣು ಬೆಳೆಯುತ್ತಿದ್ದ ಇವರಿಗೆ ಅದೊಂದು ದಿನ ತನ್ನ ಬೆಳೆ ಕೊಳ್ಳುವವರು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಕಾರಣ ಅಲ್ಲಿವರೆಗೆ ದಲ್ಲಾಳಿಗಳಿಗೆ ಬಾಳೆಕಾಯಿ ಕ್ವಿಂಟಲ್ ಲೆಕ್ಕಕ್ಕೆ ಮಾರಿ ಬರುತ್ತಿದ್ದರು. ಆ ವ್ಯಾಪಾರ ಬಂದಾಗಿದ್ದು ಮುಂದೆ ಗತಿಯೇನು? ಎಂಬ ಚಿಂತೆ ಬೆಟ್ಟದಂತೆ ಕಾಡಲು ಕಾರಣವಾಗಿತ್ತು.

ಆದರೆ ಸೋಮಶೇಖರ ಎದೆ ಗುಂದಲಿಲ್ಲ. ಯೋಚಿಸಿದರು. ಸಣ್ಣ ಪರಿಹಾರದ ಗೆರೆ ಮನದ ಮೂಲೆಯಲ್ಲಿ ಮೂಡಿತು. ತಡ ಮಾಡಲಿಲ್ಲ. ಮರುದಿನವೇ ಎದ್ದು ಹೊರಟರು. ಹಳ್ಳಿ-ಹಳ್ಳಿಗಳಿಗೆ ತಾವೇ ಸ್ವತಃ ಬುಟ್ಟಿ ಹೊತ್ತುಕೊಂಡು ವ್ಯಾಪಾರ ಪ್ರಾರಂಭಿಸಿದರು. ಇದರಲ್ಲಿ ಲಾಭವಿದೆ, ವ್ಯಾಪಾರವನ್ನು ಇನ್ನೊಂದು ಹಂತಕ್ಕೆ ತಲುಪಿಸುವ ಯೋಚನೆ ಮಾಡಿದರು.

ಆಗ ಹೊಳೆದಿದ್ದೆ ಮಾರುತಿ ಓಮಿನಿ ವಿಚಾರ. ತಾನು ಬೆಳೆದ ಬಾಳೆ ಹಣ್ಣನ್ನು ತನ್ನ ವಾಹನದಲ್ಲಿ ಇಟ್ಟುಕೊಂಡು ಹಳ್ಳಿ-ಹಳ್ಳಿಗಳಲ್ಲಿ ಮನೆ-ಮನೆಗೆ ಬಾಳೆ ಹಣ್ಣಿನ ವ್ಯಾಪಾರಕ್ಕೆ ಇಳಿದರು. ಇದಕ್ಕೆ ಇವರ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ.

ಇದರಿಂದ ನಮಗೂ ಹಾಗೂ ಜನರಿಗೂ ತುಂಬಾ ಅನುಕೂಲವಾಗಿದೆ, ಇದರಲ್ಲಿ ಶ್ರಮವೂ ಇದೆ, ಖುಷಿಯೂ ಇದೆ ಎನ್ನುತ್ತಾನೆ ರೈತ ಸೋಮಶೇಖರ.

ಪ್ರತಿ ಸೋೋಮವಾರ ನಮ್ಮ ಊರಿಗ್ ಬರ್ತಾರ್ರಿ, ಬಾಳಿ ಹಣ್ಣ್ ನಮ್ಮ್ ಬಾಗಲ್ಲಾಗ್ ತಗೊಂತೇವ್ರಿ ಎನ್ನುತ್ತಾರೆ ಗ್ರಾಹಕಿ ಹುಲ್ಲಂಬಿ ಗ್ರಾಮದ ಚನ್ನವ್ವ ಸುಣಗಾರ.

Related posts

ಮುಂಗಾರು ಮಳೆ ಬೇಗ ಬರುತ್ತೆ ; ಹವಾಮಾನ ಇಲಾಖೆ

eNewsLand Team

ನಡಕಟ್ಟಿನ ದಂಪತಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯ ಪ್ರಶಸ್ತಿ ಹಾಗೂ ಸನ್ಮಾನ

eNEWS LAND Team

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ: ಪ್ರಕಾಶ ಅಂಗಡಿ

eNEWS LAND Team